Sunday 1 August 2010

ತಿರುಕ್ಕುಱಳ್: ಅಧ್ಯಾಯ 59-68




Thirukkural in Kannada
ತಿರುಕ್ಕುಱಳ್ (ಹೊಸಗನ್ನಡ ಅನುವಾದಗಳೊಂದಿಗೆ)



ಅರ್ಥ ಭಾಗ: ಅಧ್ಯಾಯ: 59-68

ಅಧ್ಯಾಯ 59. ಬೇಹುಗಾರಿಕೆ


581. ಬೇಹುಗಾರಿಕೆ, ಕೀರ್ತಿವೆತ್ತ ನ್ಯಾಯಶಾಸ್ತ್ರ ಈ ಎರಡು ಸಾಧನೆಗಳನ್ನೂ ನಿಶ್ಚಿತವಾಗಿ ಅರಸನು ತನ್ನ ಎರಡು ಕಣ್ಣುಗಳಾಗಿ ತಿಳಿಯಬೇಕು.
582. ಎಲ್ಲರಿಗೂ ಸಂಭವಿಸುವ ಎಲ್ಲಾ ಸಂಗತಿಗಳನ್ನೂ ಎಲ್ಲಾ ಕಾಲದಲ್ಲೂ (ಬೇಹುಗಾರಿಕೆ ಮೂಲಕ) ಚೆನ್ನಾಗಿ ತಿಳಿದುಕೊಂಡಿರುವುದು
         ಅರಸನ ಕರ್ತವ್ಯವೆನಿಸುವುದು.
583. ಬೇಹುಗಾರನು ಬೇಹುಗಾರಿಕೆಯಿಂದ ತಿಳಿಸಿದ ಸಂಗತಿಗಳನ್ನು ಅರಿತು ಅವುಗಳ ಪ್ರಯೋಜನವನ್ನು ಬಳಸಿಕೊಳ್ಳಲಾರದ ಅರಸನು,
         ಜಯಗಳಿಸುವ ಮಾರ್ಗ ಬೇರೆ ಇಲ್ಲ.
584. ಅರಸನಲ್ಲಿ ಕೆಲಸ ಮಾಡುವವರು, ಅವನ ಸಂಬಂಧಿಗಳು, ಹಗೆಗಳು ಎಂಬ ಎಲ್ಲಾ ಬಗೆಯ ಜನರನ್ನು ಪರೀಕ್ಷಿಸುವುದೇ ಬೇಹುಗಾರನ
         ಕೆಲಸವಾಗುವುದು.
585. ಸಂದೇಹಕ್ಕೆ ಆಸ್ವದ ಕೊಡದ ಮಾರು ವೇಷದಿಂದ, ನೋಡಿದವರ ಕಣ್ಣೋಟಕ್ಕೆ ಅಂಜದೆ, ಯಾವೆಡೆಯಲ್ಲೂ ತನ್ನ ರಹಸ್ಯಗಳನ್ನು
         ಬಯಲುಮಾಡದೆ ಇರಬಲ್ಲವನೇ ಬೇಹುಗಾರನೆನಿಸುವನು.
586. ಸನ್ಯಾಸಿಗಳ ವೇಷಧರಿಸಿ, ದುರ್ಗಮವಾದ ಎಡೆಗಳಲ್ಲೆಲ್ಲಾ ಓಡಾಡಿ, ಪರೀಕ್ಷಿಸಿ (ತನ್ನನ್ನು ಸಂದೇಹಿಸಿದವರು) ಏನು ಮಾಡಿದರೂ ತನ್ನ
         ಪತ್ತೆ ಹೇಳದವನೇ ಬೇಹುಗಾರನೆನಿಸುವನು.
587. ಅಡಗಿಸಿರುವ ಸುದ್ದುಗಳನ್ನೂ ಕೇಳಿ ತಿಳಿಯಬಲ್ಲವನಾಗಿ, ತಿಳಿದ ವಿಷಯಗಳಲ್ಲಿ ಸಂದೇಹವಿಲ್ಲದೆ ನಡೆದುಕೊಳ್ಳುವುದೇ ಬೇಹುಗಾರನ
         ಲಕ್ಷಣ.
588. (ಅರಸನಾದವನು) ಒಬ್ಬ ಬೇಹುಗಾರನು ಪತ್ತೆಮಾಡಿ ತಂದ ಸುದ್ದಿಯನ್ನು ಮತ್ತೊಬ್ಬ ಬೇಹುಗಾರನಿಂದ ಪತ್ತೆಹಚ್ಚಿದನಂತರ
         ಒಪ್ಪಿಕೊಳ್ಳಬೇಕು.
589. ಒಬ್ಬ ಬೇಹುಗಾರನನ್ನು ಮತ್ತೊಬ್ಬ ಬೇಹುಗಾರನು ಅರಿಯದಂತೆ ಅರಸನು ನೇಮಿಸಬೇಕು. ಆ ರೀತಿ ನೇಮಿಸಲ್ಪಟ್ಟ ಮೂವರು
         ಬೇಹುಗಾರರ ಮಾತು ಹೊಂದಿಕೆಯಾದ ಮೇಲೆ ಅದನ್ನು ಸ್ವೀಕರಿಸಬೇಕು.
590. (ಅರಸನು) ಬೇಹುಗಾರನನ್ನು ಇತರರು ಅರಿಯುವಂತೆ ಸನ್ಮಾನಿಸಬಾರದು. ಹಾಗೆ ಮಾಡಿದರೆ, ರಹಸ್ಯ ಸಂಗತಿಗಳನ್ನು ತಾನೇ
         ಹೊರಗೆಡಹಿದಂತೆ ಆಗುತ್ತದೆ.

ಅಧ್ಯಾಯ 60. ಸಾಮರ್ಥ್ಯವುಳ್ಳವನಾಗಿರುವುದು

591. ಸಾಮರ್ಥ್ಯವನ್ನು ಪಡೆದವನೇ ಉಳ್ಳವನು, ಅದಿಲ್ಲದೆ ಬಂದ ಸಿರಿ ಬೆಲೆಯಿಲ್ಲದ್ದು ಎನಿಸಿಕೊಳ್ಳುತ್ತದೆ.
592. ಒಬ್ಬನಿಗೆ ಸಾಮರ್ಥ್ಯ ಹೊಂದಿರುವುದೇ (ನೆಲೆಯಾದ) ಸೊತ್ತು, (ಮತ್ತುಳಿದ) ವಸ್ತುಗಳು ನೆಲೆಯಾಗಿ ನಿಲ್ಲದೆ ನಾಶವಾಗುತ್ತವೆ.
593. ಸಾಮರ್ಥ್ಯವನ್ನು ದೃಢವಾಗಿ ತಮ್ಮ ಕೈಯಲ್ಲುಳ್ಳವರು 'ಸಿರಿಯನ್ನು ಕಳೆದುಕೊಂಡೆ' ಎಂದು ವ್ಯಸನಪಡುವುದಿಲ್ಲ.
594. ಸೋಲದ ಸಾಮರ್ಥ್ಯವನ್ನು ಉಳ್ಳವನ ಬಳಿಗೆ ಸಿರಿಯ ತಾನೇ ಹಾದಿ ಕೇಳಿಕೊಂಡು ಹೋಗಿ ಸೇರುತ್ತದೆ.
595. ನೀರಿನಲ್ಲಿ ಬೆಳೆಯುವ ಹೂವುಗಳ ಕಾಂಡಗಳ ನೀಳವು, ಆ ನೀರಿನ ಆಳಕ್ಕೆ ಅನುಗುಣವಾಗಿರುತ್ತದೆ; ಮನುಷ್ಯರ ಹಿರಿಮೆ ಅಳವು ಕೂಡ ಅವರ
         ಸಾಮರ್ಥ್ಯದ ಆಳಕ್ಕೆ ಅನುಗುಣವಾಗಿರುತ್ತದೆ.
596. (ಅರಸನಾದವನು) ಆಲೋಚಿಸುವಾಗಲೆಲ್ಲಾ ಹಿರಿಮೆಯನ್ನೇ ಕುರಿತು ಆಲೋಚಿಸಬೇಕು. ಹಿರಿಮೆ ಕೈಗೊಡದಿದ್ದರೂ ಆ ಚಿಂತನೆಯಿಂದಲೇ
         ಕೈಗೊಡಿದ ಸುಖ ದೊರೆಯುವುದು.
597. ಒಡಲನ್ನು ಪೂದೆ ಅಂಬುಗಳಿಂದ (ಮಳೆಗರೆದು) ಗಾಯಗೊಳಿಸಿ ಅಚೇತನಗೊಳಿಸಿದರೂ ಆನೆ ತನ್ನ ಧೈರ್ಯದ ನಿಲುವನ್ನು ತಾಳಿಕೊಂಡೇ
         ಇರುತ್ತದೆ; ಅದೇ ರೀತಿ ಸಾಮರ್ಥ್ಯವುಳ್ಳವರು ಎಲ್ಲ ಕಳೆದುಕೊಂಡರೂ ಅಧೀರರಾಗುವುದಿಲ್ಲ.
598. ಮನಸ್ಸಿನಲ್ಲಿ ಸಾಮರ್ಥ್ಯವಿಲ್ಲದವರು "ಈ ಲೋಕದಲ್ಲಿ ನಾನು ಉದಾರಿ" ಎಂದು ತಮ್ಮಲ್ಲಿ ತಾವು ಹೇಳಿಕೊಂಡು ಸಂತೋಷಪಡುವ
         ಭಾಗ್ಯ ಪಡೆಯಲಾರರು.
599. ದೊಡ್ಡ ಶರೀರ, ಕೂರಾದ ಕೊಂಬುಗಳು ಇದ್ದರೂ ಆನೆ, ಹುಲಿಯನ್ನು ಎದುರಿಸುವಾಗ ಭಯಪಡುತ್ತದೆ.
600. ಒಬ್ಬನಿಗೆ ಸಾಮರ್ಥ್ಯವೆಂಬುದು ಮಾನಸಿಕ ಸಂಪತ್ತು; ಅದಿಲ್ಲದವರು; ಅದಿಲ್ಲದವರು ಮನುಷ್ಯರ ರೂಪದಲ್ಲಿರುವ ಮರಗಳೇ ವಿನಾ
         ಬೇರೆ ಅಲ್ಲ.

ಅಧ್ಯಾಯ 61. ಆಲಸ್ಯವಿಲ್ಲದಿರುವಿಕೆ

601. ಕುಟುಂಬವೆನ್ನುವ ನಂದದ ಬೆಳಕು, ಸೋಮಾರಿತನವೆನ್ನುವ ಕತ್ತಲೆ ವ್ಯಾಪಿಸಿ, ಆರಿ ಹೋಗುತ್ತದೆ.
602. ತಮ್ಮ ವಂಶವನ್ನು ಬೆಳಕಾಗಿ ಬೆಳಗಬಯಸುವವರು, ಆಲಸ್ಯವನ್ನು ವ್ಯಾಧಿಯೆಂದು ತಿಳಿದು ದೊರಮಾಡಬೇಕು.
603. ಆಲಸಿಯಾಗಿ ನಡೆದು ಬಾಳುವ ಮೂರ್ಖನು ಜನಿಸಿದ ವಂಶವು ಅದನಿಗಿಂತ ಮುಂಚೆಯೇ ಅವಸಾನ ಪಡೆಯುವುದು.
604. ಸೋಮಾರಿತನದಲ್ಲೇ ಮುಳುಗಿ ವಿಶೇಷ ಪ್ರಯತ್ನವೇನೂ ಮಾಡದವರಿಗೆ, ಅವರ ಕುಲವು ನಾಶವಾಗಿ, ಅಪರಾಧಗಳು ಹೆಚ್ಚುವುವು.
605. ಕಾಲವಿಳಂಬ, ಮರೆವು, ಆಲಸ್ಯ ಹಾಗೂ ಅತಿನಿದ್ರೆ- ಈ ನಾಲ್ಕೂ ಕೆಡುವ ಸ್ವಭಾವವುಳ್ಳವರು ಬಯಸಿ ಏರುವ ಮೋಹಕ
         ನಾವೆಯಾಗುವುದು.
606. ಆಲಸಿಗಳು ರಾಜೈಶ್ವರ್ಯವನ್ನು ತಾವಾಗಿಯೇ ಪಡೆದ ಮೇಲೂ (ಅದರಿಂದ) ವಿಶೇಷ ಫಲವನ್ನು ಪಡೆಯಲು ಸಾಧ್ಯವಿಲ್ಲ.
607. ಆಲಸ್ಯವನ್ನೇ ಬಯಸಿ, ವಿಶೇಷವಾದ ಪ್ರಯತ್ನದಲ್ಲಿ ತೊಡಗದವರು ಸ್ನೇಹಿತರಿಂದ ಕಟುವಾದ ಅಪನಿಂದೆಗೆ ಗುರಿಯಾಗುವರು.
608. ಆಲಸ್ಯವು ಹಿರಿಯ ವಂಶದ ಅರಸನಲ್ಲಿ ಸೀರಿಕೊಂಡರೆ ಅವನನ್ನು ಹಗೆಗಳ ಅಡಿಯಾಳಿಗೆ ಮಾಡಿಬಿಡುವುದು.
609. ಒಬ್ಬನು ತನ್ನ ಆಲಸ್ಯವನ್ನು ಕಿತ್ತೊಗೆದರೆ, ವಂಷದಲ್ಲಿಯೂ, ಅವನ ಕಲಿತನದಲ್ಲಿಯೂ ಬಂದ ದೋಷವು ಪರಿಹಾರವಾಗುವುದು.
610. ತನ್ನಡಿಗಳಿಂದ ಲೋಕವನ್ನೇ ಅಳೆದ ಭಯವಂತನು ವ್ಯಾಪಿಸಿರುವ ಭಾಗವನ್ನೆಲ್ಲಾ ಆಲಸ್ಯವನ್ನು ಕಳೆದ ಅರಸನು ಒಟ್ಟಿಗೇ
         ಪಡೆಯುವನು.

ಅಧ್ಯಾಯ 62. ಪುರುಷಯತ್ನ ಪಡೆದಿರುವುದು

611. ಇದು ಮುಗಿಸಲು ಕಷ್ಟಸಾಧ್ಯವಾದುದು ಎಂದು ಅಧೀರತೆಗೊಳಗಾಗಬಾರದು; ಪ್ರಯತ್ನದಿಂದ ಹಿರಿಮೆಯು ಲಇಸುತ್ತದೆ.
612. ಕೆಲಸವನ್ನು ಪೂರ್ತಿಮಾಡದೆ ಅರ್ಧದಲ್ಲಿ ಕೈಬಿಟ್ಟವರನ್ನು ಲೋಕವೂ ಕೈಬಿಡುವುದು; ಅದರಿಂದ ಹಿಡಿದ ಕೆಲಸದಲ್ಲಿ ಬರುವ
         ಎಡರುತೊಡರುಗಳನ್ನೂ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು.
613. ಪರೋಪಕಾರವೆನ್ನುವ ಸಿರಿಯು, ಮಾನುಷ ಪ್ರಯತ್ನವೆನ್ನುವ ಹಿರಿಯ ಗುಣದಲ್ಲಿ ನೆಲಸಿರುವುದು.
614. ಮನುಷ್ಯ ಪ್ರಯತ್ನವಿಲ್ಲದವನ ಪರೋಪಕಾರವು, ಹೇಡಿಯು ಕೈಯಲ್ಲಿ ಕತ್ತಿ ಹಿಡಿದು ಬಲ್ಲಾಳ್ತನವನ್ನು ತೋರಿದಂತೆ
         ವ್ಯರ್ಥವಾಗುವುದು.
615. ತನ್ನ ಸುಖವನ್ನು ಬಯಸದೆ, ಕೈಕೊಂಡ ಕೆಲಸವನ್ನು ಪ್ರೀತಿಸುವವನು ತನ್ನ ಬಂಧುಗಳ ಸಂಕಟವನ್ನು ತೊಡೆದು ಹಾಕಲು ತಾಳಿನಿಲ್ಲುವ
         ಆಧಾರ ಕಂಬವಾಗುವನು.
616. ಪ್ರಯತ್ನದಿಂದ ಸಿರಿಯು ಬೆಳೆಯುವುದು; ಪ್ರಯತ್ನವಿಲ್ಲದಿದ್ದರೆ ದಾರಿದ್ರ್ಯವು ಹೋಗುವುದು.
617. ಒಬ್ಬನ ಆಲಸ್ಯದಲ್ಲಿ ದರಿದ್ರಲಕ್ಷ್ಮಿ ನೆಲಸಿ ಆಳುವಳು. ಆಲಸ್ಯವಿಲ್ಲದವನ ಪ್ರಯತ್ನದಲ್ಲಿ ಭಾಗ್ಯಲಕ್ಷ್ಮಿ ನೆಲೆಸುವಳು ಎಂದು
         (ಬಲ್ಲವರು) ಹೇಳುತ್ತಾರೆ.
618. ದಾರಿದ್ರ್ಯವು ಯಾರಿಗೂ ದೋಷವಲ್ಲ; ಅರಿವಿನಿಂದ ವಿಚಾರಮಾಡಿ ಪ್ರಯತ್ನ ಮಾಡದಿದ್ದರೆ ಅದು ದೋಷವಾಗುವುದು.
619. ದೈವವಿಧಿಯ ಕಾರಣದಿಂದ ಒಂದು ಕೆಲಸ ಫಲಿಸದೆ ಹೋದರೂ ಪ್ರಯತ್ನವು ತನ್ನ ಶರೀರಶ್ರಮದ ಕೂಲಿಯಾಗಿ ಫಲವನ್ನು ನೀಡುತ್ತದೆ.
620. ದಣೆವಿಲ್ಲದೆ, ಎದೆಗುಂದದೆ ಪ್ರಯತ್ನಶೀಲರಾಗಿರುವವರು (ತಮ್ಮನ್ನು ಕಾಡುವ) ವಿಧಿಯನ್ನು ತಮ್ಮ ಬೆನ್ನ ಹಿಂದೆ ಕಾಣುವರು.
         (ವಿಧಿಯಿಂದ ಪಾರಾಗುವರು)

ಅಧ್ಯಾಯ 63. ಆಪತ್ತಿನಲ್ಲಿ ಸ್ಥೈರ್ಯ

621. ಆಪತ್ತು ಬಂದಾಗ (ಅಧೀರರಾಗದೆ) ನಗಬೇಕು; ಅದನ್ನು ಮೆಟ್ಟಿ ಸಹಿಸಿ ಗೆದ್ದುನಿಂತರೆ ಅದಕ್ಕೂಪ್ಪುವಂಥದು ಬೇರೆ ಇಲ್ಲ.
622. ಪ್ರವಾಹದಂತೆ ಮೇರೆವರಿದು ಬರುವ ಸಂಕಟವನ್ನು, ಅರಿವುಳ್ಳವನು ತನ್ನ ಮನಸ್ಸಿನಲ್ಲಿ ನೆನೆದು, ಧೈರ್ಯವಾಗಿ ಎದುರಿಸಬಲ್ಲವನಾದರೆ,
         ಆ ಸಂಕಟವು ಮಾಯವಾಗಿ ಬಿಡುವುದು.
623. ಸಂಕಟವೊದಗಿ ಬಂದಾಗ, ಅದಕ್ಕಾಗಿ ದುಃಖಿಸಿ ಅಧೀರರಾಗದವರು, ಆ ಸಂಕಟಕ್ಕೇ ದುಃಖವನ್ನು ತಂದೊಡ್ಡಿ ಅದನ್ನೇ ಗೆದ್ದುಬಿಡುವರು.
624. ಎಡರುಗಳನ್ನು ಎದುರಿಸುವ ಸಮಯದಲ್ಲೆಲ್ಲಾ ಗಾಡಿಯತ್ತಿನಂತೆ ಕಷ್ಟವನ್ನು ತಾಳಿಕೊಳ್ಳಬಲ್ಲನಾದರೆ, ಆ ಎಡರೇ ತೊಂದರೆಯಲ್ಲಿ
         ಸಿಕ್ಕಿ ನರಳುವುದು.
625. ಸಂಕಟಗಳು ಒಂದರ ಮೇಲೊಂದರಂತೆ ದಾಳಿ ಇಟ್ಟು ಬಂದರೂ ಎದೆಗೆಡದೆ ತಾಳಬಲ್ಲವನಾದರೆ ಆ ಸಂಕಟಗಳೇ ಇಕ್ಕಟ್ಟಿನಲ್ಲಿ ಸಿಕ್ಕಿ
         ಪಾಡುಪಡುವುದು.
626. ಸಿರಿಬಂದಾಗ ನಾವು 'ಪಡೆದಿದ್ದೇವೆ' ಎಂದು ಹೆಮ್ಮೆಯಿಂದ ಕಾದುಕೊಳ್ಳಲರಿಯದವರು, ಸಂಕಟ ಬಂದಾಗ "ನಾವು ಸೋತೆವು" ಎಂದು
         ದುಃಖಪಡುವರೋ?
627. ದೊಡ್ಡವರು (ಜ್ಞಾನಿಗಳು) ಒಡಲು ಸಂಕಟಗಳಿಗೆ ತವರು ಎಂದು ತಿಳಿದಿರುವುದರಿಂದ, ಬಂದ ಸಂಕಟಗಳನ್ನು ಲೆಕ್ಕಿಸುವುದಿಲ್ಲ.
628. ಸುಖಾಮಿಷಗಳಿಗೆ ಆಸೆಪಡದವನು, ಸಂಕಟವನ್ನು ನೈಸರ್ಗಿಕವೆಂದು ಸಹಜವಾಗಿ ಪರಿಗಣಿಸುವವನು, ದುಃಖ ಬಂದಾಗ ಅದಕ್ಕಾಗಿ
         ವ್ಯರ್ಥಗೊಳಗಾಗುವುದಿಲ್ಲ.
629. ಸುಖಬಂದ ಕಾಲದಲ್ಲಿ ಸುಖವನ್ನು ಪೋಷಿಸದವನು, ದುಃಖ ಬಂದ ಕಾಲದಲ್ಲಿ ದುಃಖವನ್ನೂ ಅನುಭವಿಸುವುದಿಲ್ಲ.
630. ಒಬ್ಬನು ತನ್ನ ಪ್ರಯತ್ನದಲ್ಲಿ ಸಂಕಟವನ್ನೆ ಸುಖವೆಂದು ಸ್ವೀಕರಿಸಬಲ್ಲವನಾದರೆ, ಅವನ ಹಗೆಗಳೂ ಅವನನ್ನು ಮೆಚ್ಚುವ ಶ್ರೇಷ್ಠ
         ಗುಣವನ್ನು ಪಡೆಯುತ್ತಾನೆ.

ಅಧ್ಯಾಯ 64. ಮಂತ್ರಿಗುಣ

631. ಕೆಲಸಕ್ಕೆ ತಕ್ಕ ಸಾಧನವನ್ನೂ, ತಕ್ಕ ಕಾಲವನ್ನೂ ಕೆಲಸ ಮಾಡಲು ತಕ್ಕ ವೆಧಾನವನ್ನೂ, ಕಷ್ಟಸಾಧ್ಯವಾದ ಕೆಲಸವನ್ನೂ ಅರಿತು ವಿಶಿಷ್ಟ
         ರೀತಿಯಲ್ಲಿ ಮಾಡ ಬಲ್ಲವನೇ ಮಂತ್ರಿಯು.
632. ಮೇಲಿನ ಐದು ಗುಣಗಳೊಂದಿಗೆ ನಿರ್ಭೀತ ದೃಷ್ಟಿ, ಪ್ರಚಾರಕ್ಷಣೆ, ನಿಖರವಾದ ಜ್ಞಾನ, ಪ್ರಮಾಣಿಕ ಪ್ರಯತ್ನ ಇವುಗಳನ್ನು ವಿಶಿಷ್ಟವಾಗಿ
         ಹೊಂದಿರುವವನು ಮಂತ್ರಿಯು.
633. ಹಗೆಗಳಿಗೆ ನೆರವಾಗುವವರನ್ನು ದೊರಮಾಡಿ, ತನ್ನೊಡನೆ ಇರುವವರನ್ನು ರಕ್ಷಿಸುತ್ತ ತನ್ನಿಂದ ದೊರವಾದವರನ್ನು ಮತ್ತೆ
         ಸೇರಿಸಿಕೊಳ್ಳಬಲ್ಲವನೇ ಮಂತ್ರಿಯು.
634. ಮಾಡುವ ಕೆಲಸಗಳನ್ನು ಚೆನ್ನಾಗಿ ತಿಳಿದುಕೊಂಡು, ಅದಕ್ಕೆ ಬೇಕಾದ ಮಾರ್ಗಗಳನ್ನು ಆಲೋಚಿಸಿ ಕೈಕೊಂಡು, ನಿಷ್ಚಯವಾಗಿ
         ಅಭಿಪ್ರಾಯಗಳನ್ನು ಹೇಳಬಲ್ಲವನೇ ಮಂತ್ರಿಯು.
635. ಧರ್ಮವನ್ನು ತಿಳಿದು, ಪೂರ್ಣ ಜ್ಞಾನದಿಂದ ಮಾತಾಡ ಬಲ್ಲವನಾಗಿ, ಮಾಡುವ ಕೆಲಸದ ಮರ್ಮವನ್ನು ಅರಿತವನಾಗಿಯೂ ಇರಬಲ್ಲವನೇ
         ಅರಸನ ಮಂತ್ರಾಲೋಚನೆಗೆ ಸಹಾಯಕನೆನಿಸುವನು.
636. ಶಾಸ್ತ್ರ ಜ್ಞಾನದೊಂದಿಗೆ ಸ್ವಾಭಾವಿಕವಾದ ಸೂಕ್ಷ್ಮ ಬುದ್ದಿಯುಳ್ಳವರಿಗೆ ಎದುರಿಸಿ ನಿಲ್ಲಬೇಕಾದಂಥ ಅತಿ ಸೂಕ್ಷ್ಮ ವಿಚಾರಗಳು
         ಯಾವುವಿವೆ?
637. ಪುಸ್ತಕ ಜ್ಞಾನದಿಂದ ಕೆಲಸ ಮಾಡುವ ಬಗೆ ತಿಳಿದಿದ್ದರೂ ಲೋಕದ ಸ್ವಭಾವವನ್ನು ತಿಳಿದು ಕೆಲಸ ಮಾಡಬೇಕು.
638. ಅರಸನಾದವನು ಪೂರ್ತಿ ಅಜ್ಞಾನಿಯಾಗಿದ್ದರೂ ಅವನಿಗೆ ಖಚಿತವಾಗ ಸಲಹೆಗಳನ್ನು, ಕೊಡುವುದು ಮಂತ್ರಿಯಾದವನ ಕರ್ತವ್ಯ.
639. ಸನಿಹದಲ್ಲೇ ಇದ್ದು (ಅರಸನ) ನಾಶವನ್ನು ಬಯಸುವ ಮಂತ್ರಿಗಿಂತ, ಎಪ್ಪತ್ತು ಕೋಟಿ ಹಗೆಗಳು ಇದ್ದರೂ ಅದು ಉತ್ತಮವೇ.
640. ಕಾಯದಕ್ಷತೆಯಿಲ್ಲದ ಮಂತ್ರಿಗಳು, ತಾವು ಕೈಗೊಂಡ ಕೆಲಸದಲ್ಲಿ ಮುಂಚಿತವಾಗಿ ಸಾಕಷ್ಟು ಸಲಹೆಗಳನ್ನು ಪಡೆದಿದ್ದರೂ, ಅದನ್ನು
         ಮುಗಿಸಲಾರದೇ ಕೈಬಿಡುತ್ತಾರೆ.

ಅಧ್ಯಾಯ 65. ಮಾತಿನ ಬಲುಮೆ

641. ನ್ಯಾಯವಾದುದನ್ನೇ ಆಡುವ ನಾಲಗೆಯ ಒಳ್ಳೆಯ ಗುಣವು ಮಿಕ್ಕಲ್ಲ ಗುಣಗಳಿಂದ ವಿಶಿಷ್ಟವಾಗಿ ನಿಲ್ಲುತ್ತದೆ.
642. ಆದುವ ಮಾತಿನ ಬಲದಿಂದ, ಸಿರಿಯೂ, ಕೇಡೂ ಬರುವುದರಿಂದ, ತಾನಾಡುವ ಮಾತಿನಲ್ಲಿ ತಪ್ಪು ಸಂಭವಿಸದಂತೆ (ಎಚ್ಚರಿಕೆಯಿಂದ)
         ಕಾದು ಕೊಳ್ಳಬೇಕು.
643. ನುಡಿಯುವಾಗ ಕೇಳಿದವರನ್ನು ವಶಪಡಿಸಿಕೊಂಡು, ಹಿರಿಮೆಯುಳ್ಳವಾಗಿ ಕೇಳಲಿಚ್ಛಿಸದವರನ್ನು ಕೇಳಲು ಇಷ್ಟಪಡುವಂತೆ
         ಮಾತನಾಡುವುದು ಮಾತಿನ ಬಲ್ಮೆಯೆನಿಸುವುದು.
644. ಮಾತಿನ ಗುಣವರಿತುಆಡಬೇಕು; ಆ ರೀತಿಯ ಮಾತಿನ ಬಲ್ಮೆಗಿಂತ ಮಿಗಿಲಾದ ಧರ್ಮವಾಗಲೀ, ಸಿರಿಯಾಗಲೀ ಇಲ್ಲ.
645. ಬೇರೊಬ್ಬರು ತಮ್ಮ ಮಾತನ್ನು ಎದುರಾಡಿ ಗೆಲ್ಲಲಾರರು ಎಂಬುದನ್ನು ಅರಿತುಕೊಂಡೇ ಹೇಳಬೇಕೆನಿಸಿದ ಮಾತನ್ನು ಆಡಬೇಕು.
646. ಇತರರು ಕೇಳಲು ಇಷ್ಟಪಡುವಂತೆ ತಾವು ನುಡಿದು, ಇತರರು ಆಡಿದ ಮಾತಿನ ಪ್ರಯೋಜನವನ್ನು ಪರಿಶೀಲಿಸಿ ಸ್ವೀಕರಿಸುವುದು
         ಮಂತ್ರಿಗುಣದ ಹಿರಿಮೆಯಲ್ಲಿ ದೋಷವಿಲ್ಲದವರ ಅಭಿಮತವೆನಿಸುವುದು.
647. ಮಾತು ಬಲ್ಲವನೂ, ಜ್ಞಾಪಕಶಕ್ತಿಯುಳ್ಳವನೂ, ನಿರ್ಭೀತನೂ ಆದವನನ್ನು ಎದುರಿಸಿ ಗೆಲ್ಲುವುದು ಯಾರಿಗೂ ಅಸಾಧ್ಯ.
648. ಮಾತುಗಳನ್ನು ಜಾಣ್ಮೆಯಿಂದ ಪೋಣಿಸಿ ಇನಿದಾಗಿ ಮಾತನಾಡ ಬಲ್ಲವರನ್ನು ಪಡೆದಲ್ಲಿ ಲೋಕವು ಕೋಡಲೇ ಅವರು ಹೇಳಿದಂತೆ
         ಕೇಳುವುದು.
649. ಲೋಪವಿಲ್ಲದ ಕೆಲವೆ ಮಾತುಗಳನ್ನು ಆಡಲು ಅರಿಯದವರು ಸಹಜವಾಗಿಯೇ (ವ್ಯರ್ಥವಾದ) ಹಲವು ಮಾತುಗಳನ್ನು
         ಆಡಬಯಸುವರು.
650. ತಾವು (ಗ್ರಂಥಗಳಿಂದ) ಕಲಿತುದನ್ನು (ಇತರರು) ತಿಳಿಯುವಂತೆ ವಿಶದವಾಗಿ ವ್ಯಕ್ತಗೊಳಿಸಲಾರದವರು ಗೊಂಚಲು ಗೊಂಚಲಾಗಿ
         ಅರಳಿಯೂ, ಪರಿಮಳವನ್ನು ಬೀರದ ಹೂವುಗಳನ್ನು ಹೋಲುವರು.

ಅಧ್ಯಾಯ 66. ಕಾರ್ಯ ಶುದ್ಧಿ

651. ಯೋಗ್ಯವಾದ ನೆರವು ಸಿರಿಯನ್ನು ಮಾತ್ರ ತರುತ್ತದೆ; ಉತ್ತಮ ಕಾರ್ಯವು ಬಯಸಿದ ಎಲ್ಲವನ್ನೂ ನೀಡುವುದು.
652. ಅರಸನಿಗೆ, ಬಯಸದಕ್ಕ ಕೀರ್ತಿಯೊಂದಿಗೆ, ಉತ್ತಮ ಫಲವನ್ನು ನೀಡದ ಕಾರ್ಯವನ್ನು (ಮಂತ್ರಿಯಾದವನು) ಎಂದೆಂದಿಗೂ ತ್ಯಜಿಸಬೇಕು.
653. ತಾವು ಮೇಲೆ ಮೇಲೆ ಏರಬೇಕು ಎನ್ನುವವರು, ತಮ್ಮ ಕೀರ್ತಿಗೆ ಕಳಂಕವಾದ ಕಲಸಗಳಿಂದ ದೂರವಿರಬೇಕು.
654. ಸಮದರ್ಶಿಯಾದ  ದೃಷ್ಟಿಯುಳ್ಳವರು ತಾವು ಸಂಕಟದಲ್ಲಿ ಸಿಲುಕಿದರೂ ಕೀಳ್ತರದ ಕೆಲಸಗಳಲ್ಲಿ ತೊಡಗುವುದಿಲ್ಲ.
655. 'ಏನು ಎಂಥ ಕೆಲಸ ಮಾಡಿದೆ!' ಎಂದು ನಂತರ ಆಲೋಚಿಸಿ ದುಃಖಿಸುವ ಕಾರ್ಯವನ್ನು ಮಾಡದಿರಲಿ; ಒಂದುವೇಳೆ ತಪ್ಪಿ ಮಾಡಿದರೂ
         ಮತ್ತೆ ಅದು ಪುನರಾವರ್ತಿಯಾಗದಿರುವುದು ಒಳ್ಳೆಯದು.
656. ಹೆತ್ತ ತಾಯಿ ಹಸಿವಿಂದ ನರಳುವ ಸಮಯದಲ್ಲೂ ತಿಳಿದವರು ನಿಂದಿಸುವಂಥ (ಹೀನ) ಕೆಲಸವನ್ನು ಮಾಡಬಾರದು.
657. ನಿಂದೆಯನ್ನು ಧರಿಸಿ (ಕೀಳು ಕೆಲಸಮಾಡಿ) ಸಂಪಾದಿಸಿದ ಐಶ್ವರ್ಯಕ್ಕಿಂತ, ವಿಚಾರವಂತರ ಕಡು ಬಡತನವೇ ಲೇಸು.
658. (ದೊಡ್ಡವರು) ಮಾಡಕೂಡದೆಂದು ನಿಷೇಧಿಸಿದ ಕೆಲಸಗಳನ್ನು ಮಾಡಿದವರಿಗೆ ಆ ಕೆಲಸ ನೆರವೇರಿದರೂ ಅವು ಕಷ್ಟಗಳನ್ನೇ ತರುತ್ತವೆ.
659. ಇತರರನ್ನು ದುಃಖಕ್ಕೀಡುಮಾಡಿ ಸಂಪಾದಿಸಿದ ಸಿರಿಯೆಲ್ಲವೂ ಪಡೆದವನನ್ನು ದುಃಖಕ್ಕೀಡುಮಾಡಿ, ನಾಶವಾಗಿ ಬಿಡುವುದು. ಒಳ್ಳೆಯ
         ಹಾದಿಯಲ್ಲಿ ಪಡೆದ ಸಿರಿ ಮೊದಲು ನಷ್ಟವಾದರೂ ನಂತರ ಫಲ ಪ್ರಾಪ್ತಿಯಾಗುವುದು.
660. ವಂಚನೆಯ ಮಾರ್ಗದಲ್ಲಿ ಸಿರಿಯನ್ನು ಸೇರಿಸಿ ಕಾಪಾಡುವುದು, ಹಸಿ ಮಣ್ಣಿನ ಮಡಕೆಯಲ್ಲಿ ನೀರನ್ನು ಹೊಯ್ದು ಇರಿಸಿದಂತೆ.

ಅಧ್ಯಾಯ 67. ಕಾರ್ಯ ನಿರ್ಧಾರ

661. ಕಾರ್ಯ ನಿರ್ಧಾರವೆನ್ನುವುದು ಒಬ್ಬನ ಮನೋದಾರ್ಢ್ಯವನ್ನು ಅವಲಬಿಸಿದೆ. ಉಳಿದುವೆಲ್ಲಾ ಬೇರೆಯವೇ.
662. ಅಡ್ಡಿ ಆದಂಕಗಳು ಬರುವ ಮುನ್ನವೇ (ಅದರಿಂದ) ನೀಗಿಕೊಳ್ಳುವುದು, ಬಂದಮೇಲೆ ಎದೆಗೆಡದಿರುವುದು, ಎಂಬಿವೆರಡು ಮಾರ್ಗಗಳೇ
         ಕಾರ್ಯ ಸಾಮರ್ಥ್ಯಕ್ಕೆ ನಿದರ್ಶನವೆಂದು, ಪರಿಶೋಧನೆ ನಡಸಿದವರ ಅಭಿಮತ.
663. ಮಾಡುವ ಕೆಲಸವನ್ನು ಕೊನೆಯಲ್ಲಿ ಬಹಿರಂಗಪಡಿಸುವುದೇ ಪುರುಷ ಲಕ್ಷಣವೆನಿಸಿಕೊಳ್ಳುವುದು. ನಡುವೆ ಪ್ರಕಟಿಸಿದಲ್ಲಿ ನೀಗಲಾಗದ
         ದುಃಖವನ್ನು ತರುತ್ತದೆ.
664. ಈ ಕೆಲಸವನ್ನು ಹೀಗೆ ಮಾಡಬೇಕೆಂದು ಹೇಳುವುದು ಯಾರಿಗೂ ಸುಲಭ; ಹೇಳಿದಂತೆ ಮಾಡಿ ಮುಗಿಸುವುದು ಕಷ್ಟ ಸಾಧ್ಯವಾಗುವುದು.
665. ಕಾರ್ಯ ಪರತೆಯಿಂದ ಹಿರಿಮೆಯನ್ನು ಗಳಿಸಿ ದೊಡ್ಡವರಾದವರ ಕಾರ್ಯ ನಿರ್ಧಾರವು ಅರಸನ ಸೆಳೆದು ನಾಡಿನಲ್ಲೆಲ್ಲಾ ವ್ಯಾಪಿಸಿ
         ಗೌರವಿಸಲ್ಪಡುವುದು.
666. ಒಂದು ಕೆಲಸವನ್ನು ಮಾಡಬೇಕೆಂದು ಆಲೋಚಿಸಿದವರು, ಆ ಕೆಲಸದಲ್ಲಿ ನಿಶ್ಚಲವಾದ ನಿರ್ಧಾರವನ್ನು ತಳೆದಿದ್ದರೆ ಅವರು
         ಬಯಸಿದುದನ್ನು ಬಯಸಿದ ರೀತಿಯಲ್ಲೆ ಪಡೆಯುವರು.
667. ಉರುಳುವ ದೊಡ್ಡ ತೇರಿಗೆ, ಚಕ್ರದ ಅಚ್ಚಿನಲ್ಲಿರುವ (ಪುಟ್ಟ) ಕೀಲಿಮೊಳೆಯಂತೆ, ಲೋಕದಲ್ಲಿ (ಕೆಲವರು) ಇರುವರು; ಅವರ ಸಾಮಾನ್ಯ
         ಆಕಾರವನ್ನು ಕಂಡು ನಾವು ಕೀಳೆಣಿಸಬಾರದು.
668. ಕೈಗೊಂಡ ಕೆಲಸವನ್ನು ಮನಸ್ಸಿನಲ್ಲಿ ಚಂಚಲಗೊಳ್ಳದೆ, ಅಧೀರರಾಗದೆ, ಆಲಸ್ಯವನ್ನು ಬಿಟ್ಟು ಮಾಡಿ ಪೂರೈಸಬೇಕು.
669. ಮೊದಲು ಅತಿಯಾದ ದುಃಖವನ್ನು ತಂದೊಡ್ದಿದ್ದರೂ ಅಂತ್ಯದಲ್ಲಿ ಸುಖವನ್ನು ತರುವ ಕೆಲಸವನ್ನು, ನಿರ್ಧಾರದಿಂದ ಮಾಡಿ
         ಮುಗಿಸಬೇಕು.
670. ಬೇರೆ ಎಷ್ಟೇ ಸಾಮರ್ಥ್ಯ ಶೀಲಿಯಾಗಿದ್ದರೂ ಮಾಡುವ ಕೆಲಸದಲ್ಲಿ ನಿರ್ಧಾರ ಇಲ್ಲದವರನ್ನು ಲೋಕವು ಮನ್ನಿಸುವುದಿಲ್ಲ.

ಅಧ್ಯಾಯ 68. ಕೆಲಸ ಮಾಡುವ ಬಗೆ

671. ಒಂದು ಕೆಲಸ ಬಗ್ಗೆ, ಹಲವರಲ್ಲಿ ಆಲೋಚಿಸಿ ವಿಚಾರ ಮಾಡಿ ನಿರ್ಧಾರವನ್ನು ಕೈಗೊಳ್ಳಬೇಕು; ಆ ರೀತಿ ಕೈಗೊಂಡ ನಿರ್ಧಾರವನ್ನು
         ಕಾಲಹರಣದಿಂದ ನಿರ್ಧಾನಿಸಿದರೆ ಅದರಿಂದ ಕೆಡುಕೇ ಆಗುವುದು.
672. ಕಾಲವನ್ನು ತಾಳಿ ನಿಧಾನಿಸಿ ಮಾಡಬೇಕಾದ ಕೆಲಸವನ್ನು ನಿಧಾನಿಸಿಯೇ ಮಾಡಬೇಕು. ಆಲಸ್ಯವಿಲ್ಲದೆ ಕೂಡಲೇ ಮಾಡಬೇಕಾದ
         ಕೆಲಸವನ್ನು ಒಡನೆಯೇ (ಆಲಸ್ಯವಿಲ್ಲವೆ) ಮಾಡಿ ಪೂರೈಸಬೇಕು.
673. ಸಾಧ್ಯವಿರುವ ಎಡೆಯಲ್ಲೆಲ್ಲ ಕೆಲಸಮಾಡಿ ಮುಗಿಸುವುದು ಒಳ್ಳೆಯುದು. ಸಾಧ್ಯವಾಗದ ಎಡೆಯಲ್ಲಿ ಫಲಪ್ರದವಾಗಬಲ್ಲ್ ಉಛಿತ
         ವಿಧಾನಗಳನ್ನು ನೋಡಿ ಅನುಸರಿಸಿ ಮಾಡಬೇಕು.
674. ತೊಡಗಿದ ಕೆಲಸ, ಹಗೆತನ, ಈ ಎರಡರ ಉಳಿಕೆಗಳು, ವಿಚಾರ ಮಾಡಿ ನೋಡಿದಾಗ, ಕಿಚ್ಚಿನ ಅವಶೇಷದಂತೆ ಅರಿವಾಗದಂತೆ ವ್ಯಾಪಿಸಿ
         ಕೆಡುಕುಂಟು ಮಾಡುತ್ತವೆ.
675. ಹಣ, ಸಾಧನ, ಕಾಲ, ಕೆಲಸ, ಸ್ಥಳ- ಈ ಐದರ ವಿಷಯದಲ್ಲಿಯೂ ವಿಸ್ತರಣೆಗೆ ಎಡೆಕೊಡದೆ, ಆಲೋಚಿಸಿ ಮಾಡಬೇಕು.
676. ಕೆಲಸವನ್ನು ಮುಗಿಸುವ ರೀತಿ, ನಡುವೆ ಬರುವ ಅಡಚಣೆಗಳು, ಮುಗಿದ ಮೇಲೆ ದೊರೆಯುವ ಹಿರಿಯ ಪ್ರಯೋಜನ ಇವುಗಳನ್ನು
         ವಿಚಾರಮಾಡೀ ಕೆಲಸದಲ್ಲಿ ತೊಡಗಬೇಕು.
677. ಒಂದು ಕೆಲಸದಲ್ಲಿ ತೊಡಗಿದವನು ಮಾಡಬೇಕಾದ ಕರ್ತವ್ಯವೆಂದರೆ, ಆ ಕೆಲಸದ ರಹಸ್ಯವನ್ನು ಚೆನ್ನಾಗಿ ತಿಳಿದವನ ಸಲಹೆಯನ್ನು
         ಪಡೆದುಕೊಳ್ಳುವುದು.
678. ಒಂದು ಕೆಲಸದಿಂದ ಮತ್ತೊಂದು ಕೆಲಸವು ಆಗುವಂತೆ ಮಾಡೀಕೊಳ್ಳುವುದು. ಮದವುಳ್ಳ ಆನೆಯ ಸಹಾಯದಿಂದ ಮತ್ತೊಂದು ಆನೆಯನ್ನು
         ಹಿಡಿಯವಂತೆ.
679. ಸ್ನೇಹಿತರಾದವರಿಗೆ ಒಳ್ಳೆಯುದು ಮಾಡದಕ್ಕಿಂತ ಮುಖ್ಯವಾಗಿ ಮೊದಲು ಮಾಡಬೇಕಾದ ಕೆಲಸವೆಂದರೆ, ಶತ್ರುಗಳನ್ನು ತಮ್ಮ
         ಸಮೀಪಕ್ಕೆ ಸೆಳೆದುಕೊಳ್ಳುವುದು.
680. ಸಣ್ಣಪುಟ್ಟ ಮಾಡಲಿಕರಾದವರು, ತಮ್ಮ ಪ್ರಜೆಗಳು ಶತ್ರುಗಳಿಂದ ಭೀತರಾದಾಗ, ತಮಗಿಂತ ಬಲಿಷ್ಠರಾದ ಹಗೆಗಳು ತಮಗೆ ಕ್ಷಮೆತೋರಿ
         ಸಂಧಿಗೆ ಅವಕಾಶ ಕೊಟ್ಟರೆ ಅವರ ಸಾಮಂತಿಕೆಯನ್ನು ತೆಲೆಬಾಗಿ ಒಪ್ಪಿಕೊಳ್ಳುತ್ತಾರೆ.

No comments:

Post a Comment