Sunday 1 August 2010

ತಿರುಕ್ಕುಱಳ್: ಅಧ್ಯಾಯ 31-38



Thirukkural in Kannada
ತಿರುಕ್ಕುಱಳ್ (ಹೊಸಗನ್ನಡ ಅನುವಾದಗಳೊಂದಿಗೆ)



ಧರ್ಮ ಭಾಗ: ಅಧ್ಯಾಯ: 31-38

ಅಧ್ಯಾಯ 31. ಕೋಪ ತಾಳದಿರುವುದು


301. ಒಬ್ಬನಿಗೆ ಹಾನಿಯುಂಟು ಮಾಡುವ ಸಂಧರ್ಭಗಳಲ್ಲಿ ಕೋಪ ಮಾಡದೆ ಸಂಯಮದಿಂದ ನಡೆದುಕೊಳ್ಳುವವನೇ ಕೋಪ ನಿಗ್ರಹಿ
         ಎನಿಸಿಕೊಳ್ಳುತ್ತಾನೆ. ಬೇರೆ ಸಂಧರ್ಭಗಳಲ್ಲಿ ಅವನು ತಾಳಿಕೊಂಡರೂ, ಬಿಟ್ಟರೂ ಒಂದೇ.
302. ಸಲ್ಲದಎಡೆಗಳಲ್ಲಿ (ಅಂದರೆ ತನಗಿಂತ ಬಲಶಾಲಿಗಳಾದವರ ಮೇಲೆ) ಕೋಪ ತೋರಿಸಿಕೊಳ್ಳುವುದು ಕೆಟ್ಟದ್ದೇ; ಆದರೆ ಸಲ್ಲುವ
         ಎಡೆಗಳಲ್ಲಿ (ಅಂದರೆ ತನಗಿಂತ ದುರ್ಬಲರಲ್ಲಿ) ಕೋಪ ತೋರಿಸುವುದಕ್ಕಿಂತ ಕೆಟ್ಟದು ಬೇರೆಯಿಲ್ಲ.
303. ಯಾರಲ್ಲಿಯೂ ಕೋಪವನ್ನು ತಾಳದೆ ಅದನ್ನು ಮರೆಸಿಕೊಳ್ಳಬೇಕು; ಕೋಪದಿಂದಲೇ ಕೆಟ್ಟ ಕಾರ್ಯಗಳು ಹುಟ್ಟಿಕೊಳ್ಳುತ್ತವೆ.
304. ನಗೆಯನ್ನೂ ಸಂತೋಷವನ್ನೂ ಕೊಲ್ಲುವ ಕೋಪಕ್ಕಿಂತ ಮಿಗಿಲಾದ ಹಗೆ ಬೇರುಂಟೆ?
305. ತನ್ನನ್ನು ತಾನು ಕಾದುಕೊಳ್ಳಬೇಕೆಂಬ ಅಪೇಕ್ಷೆ ಇದ್ದರೆ, ಒಬ್ಬನು ತನಗೆ ಕೋಪವು ಬರದಂತೆ ಕಾದುಕೊಳ್ಳಬೇಕು. ಹಾಗೆ ಅದನ್ನು
         ಕಾಯದೆ ಬಿಟ್ಟರೆ, ಅದು ತನ್ನನ್ನೇ ಕೊಲ್ಲುವುದು.
306. ಕೋಪವು ತನ್ನನ್ನು ಸೇರಿಕೊಂಡವರನ್ನು ಸುಡುವ ಬೆಂಕಿಯಂತೆ; ಅದು ಕುಲವೆನ್ನುವ ರಕ್ಷಣೆಯ ಹರಿಗೋಲನ್ನು ಸುಟ್ಟು
         ನಾಶಪಡಿಸುವುದು.
307. ನೆಲಕ್ಕೆ ಕೈಯಪ್ಪಳಿಸಿ ಹೊಡೆದರೆ, ಅದರಿಂದ ಕೈಗೆ ನೋವಾಗುವುದುಹೇಗೆ ತಪ್ಪುವುದಿಲ್ಲವೂ ಹಾಗೆ ಕೋಪವನ್ನು ಬಯಸಿಕೊಂಡವನ
         ಕೇಡೂ ತಪ್ಪುವುದಿಲ್ಲ.
308. ಹಲವಾರು ಸೊಡರುಗಳ ಉರಿಯಲ್ಲಿ ಅದ್ದಿದಂಥ ಸಂಕಟಗಳನ್ನು ಒಬ್ಬನು ತಂದೊಡ್ಡಿದರೂ, ಅವನ ಮೇಲೆ ಕೋಪತಾಳದೆ
         ಸಮಾಧಾನಿಯಾಗಿರುವುದು ಮೇಲು.
309. ಒಬ್ಬನು ತನ್ನ ಮನಸ್ಸಿನಲ್ಲಿ ಕೋಪವನ್ನು ಎಣಿಸುವುದಿಲ್ಲವಾದರೆ, ಅವನು ನೆನೆದುದನ್ನೆಲ್ಲಾ ಒಡನೆಯೇ ಪಡೆದುಕೊಳ್ಳುವನು.
310. ಕೋಪದ ಎಲ್ಲೆಯನ್ನು ಮೀರಿದವರು ಸತ್ತವರಿಗೆ ಸಮಾನರು; ಅದನ್ನು ತೊರೆದವರು, ಋಷಿಗಳಿಗೆ ಸಮಾನರು.

ಅಧ್ಯಾಯ 32. ಕೆಡುಕನ್ನು ಮಾಡದಿರುವುದು

311. ಪರರಿಗೆ ಕೇಡುಂಟು ಮಾಡುವುದರಿಂದ ತಮಗೆ ಅಷ್ಟಸಿದ್ದಿಗಳು ಲಭಿಸುವಂತಿದ್ದರೂ, ಹಾಗೆ ಕೇಡುಂಟು ಮಾಡದಿರುವುದೇ ಶುದ್ದ
         ಮನಸ್ಕರ ಸಂಕಲ್ಪ.
312. ಹಗೆತನದಿಂದ, ಒಬ್ಬನು ಕೇಡೂಂಟು ಮಾಡಿದರೂ, ಅದಕ್ಕೆ ಪ್ರತಿಯಾಗಿ ಕೇಡನ್ನು ಬಗೆಯದಿರುವುದು ಸಚ್ಚಾರಿತ್ರರ ಸಂಕಲ್ಪ.
313. ತಾನು ಕೇಡು ಬಗೆಯದಿದ್ದರೂ ತನ್ನ ಮೇಲೆ ಹಗೆ ಸಾಧಿಸುವವನಿಗೆ ಪ್ರತಿಯಾಗಿ ಕೇಡೆಣಿಸಬಾರದು; ಹಾಗೆ ಎಣಿಸದರೆ ತಪ್ಪಿಸಿಕೊಳ್ಳಲು
         ಅಸಾಧ್ಯವಾದ ದುಃಖವನ್ನು ತಂದೊಡ್ಡುವುದು.
314. ತನಗೆ ಕೇಡು ಬಗೆದವರನ್ನು ದಂಡಿಸುವುದು ಹೇಗೆಂದರೆ, ಅವರು ನಾಚವರೀತಿಯಲ್ಲಿ, ಅವರಿಗೆ ಒಳ್ಳೆಯದನ್ನು ಮಾಡಿ, ಅವರು ಮಾಡಿದ
         ಅಪಕಾರವನ್ನು ಮರೆತು ಬಿಡುವುದು.
315. ಬೇರೊಂದು ಜೀವಿಯ ನೋವನ್ನು ತನ್ನ ನೋದೆಂದು ಬಗೆದು, ಕಾಪಾಡದಿದ್ದರೆ, ತಾನು ಪಡೆದ ಅರಿವಿನಿಂದ ಪ್ರಯೋಜನವೇನು?
316. ತಾನು ತನ್ನ್ ಬಾಳಿನಲ್ಲಿ ಅಹಿತಕರವೆಂದು ಕಂಡು ಅರಿತಿರುವುದನ್ನು ಬೇರೆಯವರಿಗೆ ಮಾಡಲು ಹಿಂಜರಿಯಬೇಕು.
317. ಎಷ್ಟೇ ಅಲ್ಪವಾಗಿರಲಿ, ಯಾವ ಸಂಧರ್ಭವೇ ಆಗಲಿ, ಯಾರೇ ಆಗಿರಲಿ, ಮನಸ್ಸಿನಲ್ಲಿ ಕೂಡ ಕೇಡು ಬಗೆಯದಿರುವುದೇ (ಎಲ್ಲಾ
         ಧರ್ಮಗಳಿಗಿಂತ) ಮೆಗಿಲಾದುದು.
318. ತನ್ನ ಜೀವಕ್ಕೆ ಇದು ಕೆಡುಕಾದುದು ಎಂದು ಬಲ್ಲವನು ಇತರ ಜೀವಿಗಳಿಗೆ ಆ ಕೇಡೆಸೆಗುವುದರ ಕಾರಣವೇನೋ?
319. ಮುಂಜಾನೆ ಒಬ್ಬರಿಗೆ ಕೇಡು ಬಯಸಿದರೆ, ಸಂಜೆ ವೇಳೆ ಆ ಕೇಡು ನಮ್ಮನ್ನು ತಾನಾಗಿಯೇ ಬಂದು ಸೇರಿಕೊಳ್ಳುವುದು.
320. ಕಷ್ಟವೆಲ್ಲ (ಇತರರಿಗೆ) ನೋವುಂಟು ಮಾಡಿದವರ ಮೇಲೆಯೇ ಬಂದೆರುಗುವುದು; ಕಷ್ಟಗಳಿಂದ ಮುಕ್ತರಾಗಿ ಬಾಳಬಯಸುವವರು
         ಪರರಿಗೆ ನೋವುಂಟು ಮಾಡುವುದಿಲ್ಲ.

ಅಧ್ಯಾಯ 33. ಕೊಲ್ಲವಿರುವುದು

321. ಧರ್ಮವಾದ ಕಾರ್ಯ ಯಾವುದೆಂದರೆ ಕೊಲ್ಲದಿರುವುದು; ಕೊಲ್ಲುವುದು ಧರ್ಮವಲ್ಲದ ಪಾಪ ಕಾರ್ಯಗಳನ್ನು ಉಂಟು ಮಾಡುವುದು.
322. ಇದ್ದುದನ್ನು ಹಂಚಿಕೊಂಡು ಉಂಟು ಹಲವು ಜೀವಗಳನ್ನು ಕಾಪಾಡುವುದೇ, ಶಾಸ್ತ್ರಜ್ಞರು ಹೇಳಿರುವ ಧರ್ಮಗಳಲ್ಲೆಲ್ಲ ಮಿಗಿಲಾದುದು.
323. ಕೊಲ್ಲದಿರುವುದು ಎಲ್ಲದಕ್ಕೂ ಮೇಲಾದ ಒಳ್ಳೆಯ ಗುಣ; ಸುಳ್ಳು ಹೇಳದಿರುವುದು ಅದಕ್ಕೆ ಎರಡನೆಯದು.
324. ಯಾವೊಂದು ಪ್ರಾಣಿಯನ್ನು ಕೊಲ್ಲುವುದನ್ನು ತಪ್ಪಿಸುವ ಮಾರ್ಗವೇ ಶಾಸ್ತ್ರಗ್ರಂಥಗಳು ಹೇಳುವ ಮಾರ್ಗಗಳಲ್ಲೆಲ್ಲ ಒಳ್ಳೆಯದು.
325. ಸಂಸಾರ, ಹುಟ್ಟುಗಳ ನೆಲೆಗಂಜಿ, ಆಶಗಳನ್ನು ತೊರೆದು ಸನ್ಯಾಸಿಗಳಾದವರಲ್ಲಿಯೂ, ಕೊಲೆಗಂಜಿ ಕೊಲ್ಲದಿರುವ ಧರ್ಮವನ್ನು
         ಕೈಕೊಂಡವರೇ ಮೇಲಾದವರು ಎನಿಸಿಕೊಳ್ಳುತ್ತಾರೆ.
326. ಕೊಲ್ಲದಿರುವ ಧರ್ಮವನ್ನು ಕೈಕೊಂಡು ನಡೆಯುವವನ ಬಾಳನಡೆಯ ಮೇಲೆ ಜೀವಗಳನ್ನು ಕೊಂಡುಂಬ ಮೃತ್ಯು ಬಂದು
         ಎರಗಲಾರದು.
327. ತನ್ನ ಪ್ರಾಣ ಹೋದರೂ (ಅದರ ರಕ್ಷಣೆಗಾಗಿ) ಬೇರೊಂದು ಇನಿಯೊಡಲನ್ನು ಕೊನೆಗಾಣಿಸುವ ಕೊಲೆಗೆಲಸ ಮಾಡಬಾರದು.
328. (ಯಜ್ಞ ಯಾಗಾದಿಗಳಲ್ಲಿ) ಕೊಲೆ ಮಾಡುವುದರಿಂದ ಎಷ್ಟೇ ಹಿರಿದಾದ ಸುಖ ಸಂಪತ್ತುಗಳು ಉಂಟಾದರೂ, ತಿಳಿದವರ ದೃಷ್ಟಿಯಲ್ಲಿ,
         ಕೊಲ್ಲುವುದರಿಂದ ಬರುವ ಸಿರಿಯು ಕೀಳಾದುದು.
329. ಕೀಳು ಕೆಲಸ ಯಾವುದು ಎಂದು ತಿಳಿದವರ ಮನಸ್ಸಿನಲ್ಲಿ, ಕೊಲೆಗೆಲಸ ಮಾಡುವವರು ಹೊಲೆಗೆಲಸದವರೆಂದು ಗಣಿಸಲ್ಪಡುತ್ತಾರೆ.
330. (ಹಿಂದಿನ ಜನ್ಮದಲ್ಲಿ) ಪ್ರಾಣವನ್ನು ಒಡಲಿನಿಂದ ಬೇರ್ಪಡಿಸಿದವರೇ (ಕೊಲೆಗಡುಕರೇ) ಈ ಜನ್ಮದಲ್ಲಿ ರೋಗರುಜಿನಗಳಿಂದ ನವೆದು
         ಕೀಳಾದ ಬಾಳು ನಡೆಸುವರು ಎಂದು (ಬಲ್ಲವರು) ಹೇಳುವರು.

ಅಧ್ಯಾಯ 34. ನೆಲೆ ಇಲ್ಲದಿರುವುದು

331. ನೆಲೆಯಿಲ್ಲದಿರುವ ಸಿರಿ, ಸಂಪತ್ತುಗಳನ್ನು ಶಾಶ್ವತವಾದುದೆಂದು ತಿಳಿಯವ ಅಜ್ಞಾನ ಎಲ್ಲಕ್ಕಿಂತ ಕೀಳಾದುದು.
332. ನಾಟಕವನ್ನು ನೋಡಲು ಜನ ಬಂದು ಸೇರುವಂತೆ, ಹೇರಳವಾದ ಸಿರಿ ಸಂಪತ್ತುಗಳು ಒಬ್ಬನಲ್ಲಿ ಸೇರುವುವು. ನಾಟಕ ಮುಗಿದ ಮೇಲೆ
         ಜನ ಚದುರಿ ಹೋಗುವಂತೆ, ಸಿರಿಯೂ ಅವನನ್ನು ಬಿಟ್ಟು ಹೋಗುವುದು.
333. ಸಿರಿಯು, ಚಂಚಲ ಗುಣವುಳ್ಳದು; ಆ ಸಿರಿ ಕೈಬಿಟ್ಟು ಹೋಗುವ ಮೊದಲು ನೆಲೆಯಾಗಿ ನಿಲ್ಲುವ ಧರ್ಮಕಾರ್ಯಗಳನ್ನು ಕೈಗೊಳ್ಳಬೇಕು.
334. ಬಾಳನ್ನು ಶೋಧಿಸಿ ಅರಿತವರ ದೃಷ್ಟಿಯಲ್ಲಿ, ದಿನ ಎಂಬುದು ಒಂದು ಕಾಲದ ಗಡಿಯಂತೆ ಕಾಣಿಸಿಕೊಂಡು, ಒಡಲನ್ನು ಸೀಳುತ್ತಿರುವ
         ಗರಗಸವಾಗಿ ತೋರುವುದು.
335. ನಾಲಗೆಯುಡುಗಿ ಬಿಕ್ಕಳಿಕೆ ಮೇಲೇರಿ ಬರುವ ಮುನ್ನವೇ (ಸಾವು ಬರುವ ಮುನ್ನವೇ) ಒಳ್ಳೆಯ ಕಾರ್ಯಗಳನ್ನು ತ್ವರಿತವಾಗಿ ಮಾಡಿ
         ಮುಗಿಸಬೇಕು.
336. ನಿನ್ನೆ ಬದುಕಿದ್ದವನೊಬ್ಬನು ಇಂದಿಲ್ಲವೆಂಬ ಹಿರಿಮೆಯನ್ನು ಪಡೆದಿರುವುದು ಈ ಲೋಕ.
337. ದಿನದಲ್ಲಿ ಒಂದು ಹೊತ್ತು ಸರಿಯಾಗಿ ಬಾಳುವುದನ್ನು ಅರಿಯರು ಜನ, ಆದರೆ, ಮನಸ್ಸಿನಲ್ಲಿ ಕೋಟಿಗೂ ಮಿಗಿಲಾದ ಎಣಿಕೆಗಳನ್ನು
         ತಾಳುವರು.
338. ಮೊಟ್ಟೆಯನ್ನು ಒಡೆದು ಬೇರೆಯಾಗಿ ಹಾರಿಹೋಗುವ ಹಕ್ಕಿಯಂತೆಯೇ ಶರೀರ ಮತ್ತು ಪ್ರಾಣಿಗಳ ನಡುವಿನ ಸಂಬಂಧ ಕೂಡ.
339. ಸಾವೆನ್ನುವುದು ಮೈಮರೆತ ನೆದ್ದೆಯಂತೆ; ಹುಟ್ಟು ಎನ್ನುವುದು ಆ ನಿದ್ದೆಯಿಂದ ಎಚ್ಚರಗೊಂಡು ಕಣ್ಣು ಬಿಟ್ಟಂತೆ.
340. (ರೋಗಗಳ ನೆಲೆಯಾದ) ಶರೀರದಲ್ಲಿ (ಪ್ರಯಾಣಿಕನಂತೆ) ತಂಗಿರುವ ಜೀವಕ್ಕೆ ಇನ್ನೂ ನೆಲೆಯಾದ ಬೀಡೊಂದು ಸಿದ್ದವಾಗಿಲ್ಲವೋ
         ಏನೋ?

ಅಧ್ಯಾಯ 35. ತೊರೆಯುವಿಕೆ

341. ಒಬ್ಬನು ಯಾವ ಯಾವ ವಸ್ತುಗಳಿಂದ ಸಂಬಂಧವನ್ನು ಕಡಿದುಕೊಂಡಿರವನೋ ಆ ವಸ್ತುಗಳಿಂದ ಉಂಟಾಗುವ ಬಾಧೆಯಿಂದ ಅವನು
         ಮುಕ್ತನಾಗುವನು.
342. ದುಃಖವಿಲ್ಲದಿರುವ ನೆಲೆಯನ್ನು ಬಯಸುವುದಾದರೆ, ಎಲ್ಲ ವಸ್ತುಗಳನ್ನು ಇರುವಾಗಲೇ ತೊರೆದುಬಿಡಬೇಕು. ತೊರೆದ ಬಳಿಕ ಇಲ್ಲಿಯೇ
         (ಈ ಲೋಕದಲ್ಲಿಯೇ) ಪ್ರಾಪ್ತವಾಗುವ ಸುಖಗಳು ಹಲವಿವೆ.
343. ಐದು ಇಂದ್ರಿಯಗಳ ಆಡುಂಬೋಲವನ್ನು ನಾಶಪಡಿಸಬೇಕು; ಆ ಇಂದ್ರಿಯಗಳು ಬಯಸುವ ಎಲ್ಲ ಭೋಗ ವಸ್ತುಗಳನ್ನು ಒಂದೇ ಸಾರಿಗೆ
         ತೊರೆಯಬೇಕು.
344. ಎಲ್ಲವನ್ನೂ ತೊರೆದಿರುವುದು. ತಪಸಿಗೆ ಸಹಜಗುಣವೆನಿಸುವುದು; ವಸ್ತುಗಳನ್ನು ಪಡೆದಲ್ಲಿ, ಅವು ಮತ್ತೆ ಮನಸನ್ನು ಮರುಳುಗೊಳಿಸಿ,
         ತಪಸ್ಸಿನ ತನ್ಮಯತೆಯನ್ನು ಕೆಡಿಸುವುವು.
345. ಹುಟ್ಟನ್ನೇ ಹರಿದುಕೊಳ್ಳಲು ಪ್ರಯತ್ನಿಸುವವರಿಗೆ ಶರೀರವೇ ಒಂದು ಹೊರೆ; ಹಾಗಿರುವಾಗ (ವಸ್ತು ಮೋಹದಿಂದ) ಮತ್ತಷ್ಟು ತೊಡರು,
         ಸಂಕಟಗಳನ್ನು ಬರ ಮಾಡೀಕೊಳ್ಳುವುದೇಕೆ?
346. ನಾನು ನನ್ನದು ಎಂಬ ಮೋಹವನ್ನು ಕತ್ತರಿಸಿಕೊಂಡವನು ದೇವತೆಗಳಿಗೂ ಎಟುಕದ ಎತ್ತರವಾದ ಲೋಕವನ್ನು ಸೇರುವನು.
347. ನಾನು ನನ್ನದೆಂಬ ವ್ಯಾಮೋಹಗಳನ್ನು ಅಂಟಿಕೊಂಡಿರುವವರನ್ನು ದುಃಖಗಳೂ ಬಿಡದೆ ಬಿಗಿಯಾಗಿ ಅಂಟಿಕೊಳ್ಳುತ್ತವೆ.
348. ಎಲ್ಲವನ್ನೂ ತೊರೆದವರು ಮುಕ್ತಿಯನ್ನು ಪಡೆದವರು; ತೊರೆಯದೆ ಉಳಿದವರೆಲ್ಲ ಮೈಮರೆತು (ಹುಟ್ಟು ಸಾವುಗಳ) ಬಲೆಯಲ್ಲಿ
         ಸಿಲುಕಿದವರು.
349. ನಾನು ನನ್ನದು ಎಂಬ ಇಬ್ಬಗೆಯಾದ ಸಂಬಂಧ ಹರಿದು ಹೋದೊಡನೆಯೇ ಹುಟ್ಟು ಹರಿಯುವುದು; ಅದಿಲ್ಲವಾದರೆ, ಹುಟ್ಟು
         ಸಾವುಗಳಿಂದ ನೆಲೆಯಿಲ್ಲದೆ ತೊಳಲಾಡಬೇಕಾಗುವುದು.
350. ಆಶೆಯ ಬಂಧನವನ್ನು ಕತ್ತರಿಸಿಕೊಂಡವನು ದೇವರು; ನಾವಿ ಈ ಲೋಕದಲ್ಲಿರುವ ವ್ಯಾಮೋಹವನ್ನು ಕತ್ತರಿಸಿಕೊಳ್ಳಬೇಕಾದರೆ, ಆ
         ದೇವರಲ್ಲಿ ಶರಣಾಗಬೇಕು.

ಅಧ್ಯಾಯ 36. ನಿಜವನ್ನು ತಿಳಿಯುವುದು

351. ನಿಜವಲ್ಲದವುಗಳನ್ನು ನಿಜವೆಂದು ಭಾವಿಸುವ ಮರಳುತನದಿಂದ ಕೀಳಾದ ಹುಟ್ಟು ಸಂಭವಿಸುವುದು.
352. ತಮ್ಮನ್ನು ಆದರಿಸಿರುವ ಭ್ರಮೆಯನ್ನು ತೊರೆದು, ಶುದ್ದವಾದ ದರ್ಶನದಿಂದ ಲೋಕವನ್ನು ನೋಡುವವರಿಗೆ ಭವದ ಕತ್ತಲು ಹರಿದು
         ಸುಖದ ನೆಲೆ ಪ್ರಾಪ್ತವಾಗುವುದು.
353. ಸಂದೇಹವಿಲ್ಲದ ನಿರ್ಮಲ ಮನಸ್ಸಿನಿಂದ ನಿಜವನ್ನು ತಿಳಿದವರಿಗೆ, ವಾಸಿಸುತ್ತಿರುವ ಭೂಲೋಕಕ್ಕಿಂತ, ದೇವಲೋಕವೇ
         ಸಮೀಪವೆನಿಸುವುದು.
354. ಪಂಚೇಂದ್ರಿಯಗಳ ವಾಸನೆಯನ್ನು ಗೆದ್ದು ಐದು ಬಗೆಯ ಅರಿವುಗಳನ್ನು ಪಡೆದಿದ್ದರೂ, ನಿಜ ತತ್ವದರಿವಿಲ್ಲದವರಿಗೆ ಅದರಿಂದ ಫಲ
         ಉಂಟಾಗುವುದಿಲ್ಲ.
355. ಯಾವ ವಸ್ತು ಯಾವ ರೀತಿಯಲ್ಲಿ ತೋರಿದರೂ (ಆ ತೋರಿಕೆಯನ್ನೇ ನಿಜವೆಂದು ಭಾವಿಸದೆ) ಅವರ ನಿಜವಾದ ಅರ್ಥವನ್ನು
         ತಿಳಿದುಕೊಳ್ಳುವುದೇ ಅರಿವು ಎನಿಸಿಕೊಳ್ಳುತ್ತದೆ.
356. ಕಲಿಯಬೇಕಾದುದನ್ನು ಕಲಿತುಕೊಂಡು, ಇಲ್ಲಿಯೇ ನಿಜದ ಹುರುಳನ್ನು ಕಂಡವರು ಮತ್ತೆ ಈ ಹುಟ್ಟಿಗೆ ಬಾರದಿರುವ ಮಾರ್ಗವನ್ನು
         ಪಡೆದುಕೊಳ್ಳುವರು. (ಮೋಕ್ಷವನ್ನು ಪಡೆಯುವರು)
357. ಒಬ್ಬನ ಮನಸ್ಸು ನಿಜ ವಸ್ತುವನ್ನು ಇರಿವಂತೆಯೇ ನಿಶ್ಚಯವಾಗಿ ಅರ್ಥಮಾಡಿಕೊಂಡರೆ, ಅವನಿಗೆ ಮತ್ತೆ ಮರುಹುಟ್ಟು ಇರುವುದೆಂದು
         ಭಾವಿಸಬಾರದು.
358. ನಿಜ ತತ್ವವನ್ನು ಮರೆಸಿ ತರೆದ ದುಃಖಗಳನ್ನು ತಂದೊಡ್ಡುವುದರಿಂದ ಹುಟ್ಟನ್ನು ಅಜ್ಞಾನವೆಂದು ತಿಳಿದು ಹರಿದುಕೊಳ್ಳಬೇಕು; ಹಾಗಿ
         ಹುಟ್ಟೆಂಬ ಅಜ್ಞಾನವನ್ನು ತೊರೆದು ಮುಕ್ತಿಯ ನೆಲೆಗೆ ಕಾರಣನಾದ ಪರವಸ್ತುವನ್ನು ತಿಳಿಯುವುದೇ ನಿಜವಾದ ಅರಿವು.
359. ಎಲ್ಲಾ ಸತ್ಯಗಳಿಗೂ ಆಶ್ರಯವಾದ ಪರವಸ್ತುವನ್ನು ಅರಿತು, ಮಮಕಾರಗಳ ಆಶ್ರಯವನ್ನು ನಾಶಪಡಿಸಿಕೊಂಡರೆ, ಒಂದು ಸೇರಲಿರುವ
         ದುಃಖಗಳೊಂದೂ ಬಳಿಸಾರುವುದಿಲ್ಲ.
360. ನಿಜ ತತ್ವವನ್ನು ತಿಳಿದು, ಕಾಮ, ಕ್ರೋಧ, ಮೋಹಗಳೆಂಬ ಮೂರರ ಹೆಸರೂ ಕೆಡುವಂತೆ ನಡೆದುಕೊಂಡರೆ, ಅವುಗಳಿಂದುಂಟಾಗುವ
         ದುಃಖಗಳೂ ಅಳಿಯುತ್ತದೆ.

ಅದ್ಗ್ಯಾಯ 37. ಆಸೆಯನ್ನು ಹರಿಯುವುದು.

361. ಎಲ್ಲಾ ಜೀವಿಗಳಿಗೂ ಎಲ್ಲ ಕಾಲಗಳಲ್ಲಿಯೂ ತಪ್ಪದೆ ಉಂಟಾಗುತ್ತಿರುವ ಹುಟ್ಟಿನ ವ್ಯರ್ಥಗಳಿಗೆಲ್ಲ ಆಸೆಯೇ ಬೀಜವೆಂದು ಜ್ಞಾನಿಗಳು
         ಹೇಳುವರು.
362. ಒಬ್ಬನು ಬಯಸುವುದಾರೆ, ಹುಟ್ಟಿಲ್ಲದ ಸ್ಥಿತಿಯನ್ನು ಬಯಸಬೇಕು; ಆಶೆಗಳನ್ನು ಹರಿದುಕೊಳ್ಳುವುದರಿಂದ ಅದು ಲಭ್ಯವಾಗುವುದು.
363. ಆಶೆಯನ್ನು ಹರಿದುಕೊಳ್ಳುವುದಕ್ಕಿಂತ ಅಮೂಲ್ಯವಾದ ಸಿರಿ ಈ ಲೋಕದಲ್ಲಿ ಇಲ್ಲ; ಬೇರೆ ಎಲ್ಲೂ (ಪರ ಲೋಕದಲ್ಲಿಯೂ) ಅದಕ್ಕೆ
         ಎಣಿಯಾದುದು ಇಲ್ಲ.
364. (ಮನಃ) ಶುದ್ಧಿ ಎಂದು ಕರೆಯಲ್ಪಡುವುದು ಆಶೆ ಇಲ್ಲದ ನೆಲೆಯೇ; ಆಶೆ ಹರಿದ ಸಿತ್ಥಿಯು ಪರಮಾರ್ಥವನ್ನು ಬೇಡೂವುದರಿಂದ
         ಉಂಟಾಗುವುದು.
365. ಆಶೆಯನ್ನು ಹರಿದುಕೊಂಡವರೇ ಹುಟ್ಟು ಸಾವುಗಳ ಬಂಧನದಿಂದ ಮುಕ್ತರಾದವರು; ಉಳಿದವರು ಆ ರೀತಿ ಮುಕ್ತರಲ್ಲ.
366. ಆಸೆಗೆ ಅಂಜಿ ಬಾಳುವುದೇ ಧರ್ಮ; (ಸ್ವಲ್ಪ ಎಚ್ಚರ ತಪ್ಪಿದರೂ ಸಾಕು) ಅದು ಒಬ್ಬನನ್ನು ವಂಚಿಸಿ ನಾಶ ಮಾಡುತ್ತದೆ.
367. ಒಬ್ಬನು ತನ್ನ ಆಶೆಯನ್ನು ಸಂಪೂರ್ಣ ಕತ್ತರಿಸಿಕೊಂಡರೆ, ಒಳ್ಳೆಯದುಂಟು ಮಾಡುವ ಅವಿನಾಶಿಕರ್ಮವು (ಮುಕ್ತಿಗೆ ಕಾರಣವಾಗುವ
         ಕರ್ಮವು) ತಾನು ಬಯಸಿದ ದಾರಿಯಲ್ಲಿ ಒದಗುತ್ತದೆ.
368. ಆಶೆ ಇಲ್ಲದವರಿಗೆ ದುಃಖಗಳು ಇಲ್ಲವಾಗುವುವು; ಆಧೆ ಇದ್ದರೆ ಆ ದುಃಖಗಳು ಬಿಡದೆ ಮೇಲೆ ಮೇಲೆ ಬರುತ್ತವೆ.
369. ಆಶೆಯೆನ್ನುವುದು ದುಃಖಗಳಲ್ಲೇ ಮಿಗಿಲಾದ ದುಃಖ; ಅದು ನಾಶವಾದರೆ ಈ ಲೋಕದಲ್ಲೆ ಸುಖವು ನಿರಂತರವಾಗಿ ಲಭ್ಯವಾಗುವುದು.
370. ಆರದ (ತಣಿಯದ) ಸ್ವಭಾವವುಳ್ಳ ಆಶೆಯನ್ನು ನೀಗಿದರೆ, ಅದರಿಂದಲೇ, ಮಾರ್ಪಡದ (ಶಾಶ್ವತ) ಸುಖವು ಬಾಳಿನಲ್ಲಿ ಲಭ್ಯವಾಗುವುದು.

ಅಧ್ಯಾಯ 38. ವಿಧಿ

371. ಅದೃಷ್ಟ ತರುವ ವಿಧಿಯಿಂದ ಪ್ರಯತ್ನಶೀಲತೆಯುಂಟಾಗುತ್ತದೆ; ಸಿರಿ ಕೈತಪ್ಪಿಸುವ ವಿಧಿಯಿಂದ ಆಲಸಿಕೆ ಹುಟ್ಟಿಕೊಳ್ಳುತ್ತದೆ.
372. ದುರ್ವಿಧಿಯು ಬುದ್ಧಿವಂತನನ್ನೂ ದಡ್ಡನನ್ನಾಗಿ ಮಾಡೀಬಿಡುತ್ತದೆ; ಅದೃಷ್ಟ ತರುವ ವಿಧಿ ಅವನ ಬುದ್ಧಿವಂತಿಕೆಯನ್ನು ವಿಸ್ತರಿಸುತ್ತದೆ.
373. ಒಬ್ಬನು ಹಲವಾರು ಸೂಕ್ಷ್ಮ ವಿಚಾರಗಳುಳ್ಳ ಶಾಸ್ತ್ರ ಗ್ರಂಥಗಳನ್ನು ಓದಿಕೊಂಡಿದ್ದರೂ ವಿಧಿ ತಂದ ಸ್ವಾಭಾವಿಕವಾದ ಅರಿವೇ ಅವನಲ್ಲಿ
         ಮೇಲಾಗಿ ನಿಲ್ಲುತ್ತದೆ.
374. (ವಿಧಿಯ ಕಾರಣದಿಂದ) ಲೋಕದ ಸ್ವಭಾವದಲ್ಲಿ ಎರಡು ಬಗೆಗಳು; ಸಿರಿವಂತರಾಗಿರುವುದು ಬೇರೆ, ಬುದ್ಧಿವಂತರಾಗಿರುವುದು ಬೇರೆ.
375. ಸಿರಿಯನ್ನು ಕೂಡಿಡುವ ಪ್ರಯತ್ನದಲ್ಲಿ (ವಿಧಿಯ ದೆಸೆಯಿಂದ) ಒಳ್ಳೆಯದೆಲ್ಲ ಕೆಟ್ಟದೂ, ಕೆಟ್ಟದೆಲ್ಲ ಒಳ್ಳೆಯದೂ ಆಗುವುದುಂಟು.
376. ತಮ್ಮ ಪಾಲಿಗೆ ವಿಧಿ ಕೊಡದ ವಸ್ತುಗಳನ್ನು ಎಚ್ಚರಿಕೆಯಿಂದ ಕಾಪಾಡಿಕೊಂಡರೂ ಅವು ನಿಲ್ಲುವುದಿಲ್ಲ; ವಿಧಿ ವಸ್ತುಗಳನ್ನು ಬೇಡವೆಂದು
         ಹೊರಗೆ ಸುರಿದರೂ ಅವು ತೊಲಗುವುದಿಲ್ಲ.
377. ವಿಧಿಯು ಪಾಲು ಮಾಡಿಕೊಟ್ಟ ಬಗೆಯಲ್ಲಲ್ಲದೆ, ಕೋಟಗಟ್ಟಲೆ ಹಣವನ್ನು ಕೊಡಿಟ್ಟುಕೊಂಡರೂ, ಅದನ್ನು ಅನುಭವಿಸುವುದು
         ಕಷ್ಟವೇ. (ಎಷ್ಟೇ ಕೊಡಿಟ್ಟರೂ ವಿಧಿ ನೇವಿಸಿದಷ್ಟೇ ಅನುಭವಿಸಲು ಸಾಧ್ಯ)
378. ವಿಧಿಯಿಂದ ಬರಬೇಕಾದ ದುಃಖಗಳು ಬಂದು ಕಷ್ಟಕ್ಕೀಡುಮಾಡದೆ ಹಾಗೆಯೆ ಕಳೆಯುವುದಾದರೆ, ಅನುಭವಿಸಲು ಏನೂ ಇಲ್ಲದ
         ದರಿದ್ರರು ಸನ್ಯಾಸಿಗಳಾಗಿ ಬಿಡುತ್ತದ್ದರಲ್ಲವೆ?
379. ತಮಗೆ ಒಳ್ಳೆಯುದಾಗುವ ಕಾಲದಲ್ಲಿ ಸುಖ್ ಸಂತೋಷಗಳಿಂದ ಸ್ವಾಗತಿಸುವವರು, ಕೆಟ್ಟದು ಸಂಭವಿಸಿದಾಗ ಆತಂಕ ಪಡುವುದೇಕೆ?
         (ಸುಖ ದುಃಖ ಎರಡೂ ವಿಧಿಯ ಮುಖಗಳೇ. ಯಾವುದೇ ಬಂದರೂ ಅನುಭವಿಸದೆ ಬೇರೆ ಮಾರ್ಗವಿಲ್ಲ)
380. ವಿಧಿಗಿಂತ ಅಧಿಕ ಬಲಶಾಲಿಯಾದುದು ಯಾವುದಿದೇ? ಅದನ್ನು ಮರೆಯಲು ಬೇರೊಂದನ್ನು ನೆನೆದರೂ ವಿಧಿ ತಾನೇ ಮುಂದೆ
         ಬಂದು ನಿಲ್ಲುತ್ತದೆ.

No comments:

Post a Comment