Sunday 1 August 2010

ತಿರುಕ್ಕುಱಳ್: ಅಧ್ಯಾಯ 1-10



Thirukkural in Kannada
ತಿರುಕ್ಕುಱಳ್ (ಹೊಸಗನ್ನಡ ಅನುವಾದಗಳೊಂದಿಗೆ)



ಧರ್ಮ ಭಾಗ: ಅಧ್ಯಾಯ: 1-10

ಅಧ್ಯಾಯ 1. ದೈವಸ್ತುತಿ


  1. ಅಕ್ಷರಗಳಿಗೆಲ್ಲಾ ಅಕಾರವೇ ಮೊದಲು, ಲೋಕಕ್ಕೆಲ್ಲಾ ಮೊದಲು ಆದಿ ಭಗವನ್
  2. ಪರಮ ಶುದ್ದಜ್ಞಾನ ಸ್ವರೂಪದ ಭಗವಂತನ ಸತ್ ಪಾದಗಳಿಗೆ ನಮಿಸದಿದ್ದರೆ ಕಲಿತಂದರಿಂದಾದ ಫಲವೇನು ?
  3. ಮಲರೊಳುಜ್ಜೀವಿಸುವವನ ಪರಮ ಪಾದಗನ್ನು ಸೇರಿದವರು ಭೂಮಿಯ ಮೇಲೆ ನಿಡುಗಾಲ ಬಾಳುವರು
  4. ಬೇಕು ಬೇಡಗಳೊಂದೂ ಇಲ್ಲದವನ (ಭಗವಂತನ) ಅಡಿಗಳನ್ನು ಸೇರಿದವರು ದುಗುಡದಿಂದ ದೂರವಾಗುವರು
  5. ಮನದ ಇರುಳಿಂದುಂಟಾಗುವ ಒಳಿತು, ಕೆಡಕುಗಳೆಂಬ ಎರಡು ವಿಧವಾದ ಕರ್ಮಗಳೂ ಭಗವಂತನ ಮಹಿಮೆಯನ್ನು ಹೊಗಳುವವರಿಗೆ ಸೇರುವುದಿಲ್ಲ
  6. ಐದು ಇಂದ್ರಿಯಗಳ ಬಾಗಿಲನ್ನು ಮುಚ್ಚಿದವನು ಭಗವಂತ. ಅವನ ಕಳಂಕವಿಲ್ಲದ ನೇರವಾದ ಋಜುಮಾರ್ಗದಲ್ಲಿ ನಿಂತವರು ನಿಡುಬಾಳನ್ನು ನಡೆಸುವರು.
  7. ತನಗೆ ಉಪಮೆಯಿಲ್ಲದವನು ಭಗವಂತ. ಅವನ ಪಾದಗಳನ್ನು ನಂಬಿದವರಿಗೆ ಅಲ್ಲದೆ, ಉಳಿದವರಿಗೆ ಮನಸ್ಸಿನ ಕಳವಳ ಕಳೆದು ಕೊಳ್ಳುವುದು ಅಸಾಧ್ಯ.
  8. ಸಜ್ಜಾರಿತ್ರ್ಯದ ಕಡಲಾದ ಭಗವಂತನ ಅಡಿಗಳನ್ನು ಸೇರಿದವರಿಗಲ್ಲದೆ (ಮಿಕ್ಕವರಿಗೆ) ಸಂಸಾರ ಸಾಗರಗಳನ್ನು ಈಸಿ ದಾಟಲು ಸುಲಭವಲ್ಲ.
  9. ಎಂಟು ಗುಣವುಳ್ಳವನ (ಭಗವಂತನ) ಪಾದಗಳಿಗೆ ಎರಗದ ತಲೆಯು, ಗ್ರಹಣ ಶಕ್ತಿಯನ್ನು ಕಳೆದುಕೊಂಡ ಇಂದ್ರಿಯಗಳಂತೆ ನಿಷ್ಪಲವಾಗುತ್ತದೆ.
  10. ಎರೆಯುನಡಿ (ದೇವರಪಾದ) ಸೇರಿದವರು ಹುಟ್ಟೆಂಬ ಹೆಗ್ಗಡಲನ್ನು ದಾಟುವರು ; ಎರೆಯನಡಿ ಸೇರದವರು ಅದನ್ನು ದಾಟಲಾರರು.

ಅಧ್ಯಾಯ 2.  ಮಳೆಯಸ್ತುತಿ

11. ಮಳಯಿಂದಲೇ ಲೋಕವು ವರ್ಧಿಸುತ್ತದೆ; ಅದುದರಿಂದ ಅದು ಅಮೃತಕ್ಕೆ ಸಮ   
12. ಉಣ್ಣುವವರಿಗೆ ತಕ್ಕ ಉಣಿಸನ್ನು ಬೆಳೆಯೆಲು ನೆರವಾಗುವುದು ಮಳೆ ; ನೀರಡಿಕೆಯಿಂ ಬಳಲಿದವರಿಗೆ ತಾನೇ ಉಣಿಸಾಗುವುದು ಮಳೆ.
13. ಮಳೆ ಬಾರದೆ ಹೋದರೆ ಸುತ್ತಲೂ ನೀರಿನಿಂದ ವ್ಯಾಪಿಸಿದ ಲೋಕವನ್ನು ಹಸಿವು ಕಾಡುತ್ತದೆ.
14. ಮೋಡದಿಂದ ಸುರಿಯುವ ಮಳೆಯ ನೀರಿನಾಶ್ರಯವು ಬಲಗುಂದಿತಾದರೆ ರೈತರ ವ್ಯವಸಾಯವೂ ನಿಂತಂತೆಯೇ
15. ಸಕಾಲಕ್ಕೆ ಸುರಿಯದೆ, ಮಳೆ ಮನುಷ್ಯನ ಬಾಳನ್ನು ಕೆಡಿಸುತ್ತದೆ. ಅದೇ ರೀತಿ ಸಕಾಲಕ್ಕೆ ಸುರಿದು, ಕೆಟ್ಟ ಮನುಷ್ಯನನ್ನು ಮೇಲೆತ್ತುವುದೂ ಮಳೆಯೇ.
16. ಆಕಾಶದಿಂದ ಮಳೆಹನಿ ಬೇಳದೆ, ಹಸಿರು ಹುಲ್ಲು ಕೂಡ ತಲೆಯೆತ್ತದು.
17. ಮೋಡವು ಮಳೆಯನ್ನು ಸುರಿಸುವ ಕೃಪೆತೋರದೆ ಹೋದಲ್ಲಿ, ಕಡಲಿನ ಅಪಾರ ಜಲಸಂಪತ್ತು ಕೂಡ ಕುಗ್ಗಿಹೋಗುವುದು.
18. ಲೋಕದಲ್ಲಿ ಮಳೆ ಸುರಿಯದಿದ್ದರೆ, ಮೇಲು ಲೋಕದಲ್ಲಿರುವ ದೇವತೆಗಳಿಗೂ ಜನರು ಪೂಜೆ, ಉತ್ಸವಗಳನ್ನು ವೈಭವದಿಂದ ನಡೆಸುವುದಿಲ್ಲ.
19. ಮಳೆಯಾಗದೇ ಹೋದರೆ ಲೋಕದಲ್ಲಿ ದಾನ, ತಪಸ್ಸು ಎರಡೂ ನೆಲೆಸಿ ಇರುವುದಿಲ್ಲ.
20. ನೀರಿನಿಂದಲೇ ಲೋಕಾಚಾರ ಎಲ್ಲ; ಮಳೆ ಬಾರದಿದ್ದರೆ, ಒಳ್ಳೆಯ ಆಚಾರ ನಡವಳಿಕೆಗಳೂ ನೆಲೆಯಾಗಿ ನಿಲ್ಲುವುದಿಲ್ಲ.

ಅಧ್ಯಾಯ 3. ತೋರೆದವರ ಹಿರಿಮೆ

21. ಒಳ್ಳೆಯ ನಡತೆಯಲ್ಲಿ ನಡೆದುಕೊಂಡು, ಎಲ್ಲವನ್ನು ತೊರೆದು ಸನ್ಯಾಸಧರ್ಮದಲ್ಲಿ ಬಾಳಿದವರ ಹಿರಿಮೆಯನ್ನು ಮೇಲಾಗಿ ವರ್ಣಿಸಿ ಹೇಳುವುದು ಎಲ್ಲ ಶಾಸ್ತ್ರ ಗ್ರಂಥಗಳ ಗುರಿಯೂ ಆಗಿದೆ
22. ತೊರೆದವರ ಮಹಿಮೆಯನ್ನು ಅಳೆಯಲು ಹೋಗುವುದು, ಲೋಕದಲ್ಲಿ ಸತ್ತವರ ಸಂಖ್ಯಯನ್ನು ಎಣಿಸುವಂತೆ
23. ಎರಡು ಬಗೆಯನ್ನು (ಜನನ ಮತ್ತು ಮುಕ್ತಿ) ಅರಿತುಕೊಂಡು ಧರ್ಮಮಾರ್ಗದಲ್ಲಿ ನಡೆಯುವರ ಹಿರಿಮೆಯು ಲೋಕವನ್ನು ಬೆಳಗುತ್ತದೆ.
24. ದೃಢನಿಶ್ಚಯದಿಂದ ಐದಿಂದ್ರಿಯಗಳನ್ನು ಕಡಿವಾಣ ಹಾಕಿ ಕಾಪಾಡುವವನು, ವರನಿಧಿಯಾದ ಮೋಕ್ಷಕ್ಕ್ ಬೀಜದಂತೆ
25. ಐದು ಇಂದ್ರಿಯಗಳನ್ನು ನಿಗ್ರಹಿಸಿದವನ ತಪೋಬಲಕ್ಕೆ ವಿಶಾಲವಾದ ಆಕಾಶದಲ್ಲಿ ನೆಲೆಸಿರುವ ದೇವತೆಗಳ ದೊರೆಯಾದ ಇಂದ್ರನೇ ಸಾಕ್ಷಿ.
26. ಮಾಡಲು ಅಸಾಧ್ಯವೆನಿಸಿದುದನ್ನು ದೊಡ್ಡವರು ಮಾಡಿತೋರುತ್ತಾರೆ ; ಅಲ್ಪರಿಗೆ ಅದು ಅಸಾಧ್ಯ.
27. ರೂಪ, ರಸ, ಸ್ಪರ್ಶ, ಶಬ್ದ, ಗಂಧಗಳೆಂಬ ಐದು ಇಂದ್ರಿಯಗಳ ಬಗೆಗಳನ್ನು ಬಲ್ಲವನ ಬಳಿಯಲ್ಲಿಯೇ ಲೋಕವೆಲ್ಲ ನೆಲಸಿರುತ್ತದೆ.
28. ಅರ್ಥವತ್ತಾದ ಮಾತುಗಳನ್ನು ಆಡುವ ಜ್ಞಾನಿಗಳ ಹಿರಿಮೆಯನ್ನು ಲೋಕದಲ್ಲಿ ಅವರ ವೇದರೂಪದ ಬೋಧೆಯ ಮಾತುಗಳಲ್ಲೇ ಕಾಣಬಹುದು.
29. ಗುಣವೆಂಬ ಶಿಖರವನ್ನೇರಿ ನಿಂತವರ ಕೋಪವು, ಕ್ಷಣಮಾತ್ರವಾದರೂ ತಾಳಿ ಕೊಳ್ಳಲು ಅಸಾಧ್ಯ.
30. ಧರ್ಮ ಮಾರ್ಗದಲ್ಲಿ ನಡೆಯುವವರೇ ಅಂದಣರು (ಬ್ರಾಹ್ಮಣರು) ; ಏಕೆಂದರೆ ಅವರು ಮತ್ತೆಲ್ಲ ಪ್ರಾಣಿಗಳನ್ನು ನಿಜವಾದ ಕರುಣೆಯಿಂದ ಕಾಣಲು ಪ್ರತಿಜ್ಞೆ ಮಾಡುತ್ತಾರೆ.

ಅಧ್ಯಾಯ 4. ಧರ್ಮದ ಬಲವನ್ನು ಕುರಿತು

31. ಶ್ರೇಯಸ್ಸು ಮತ್ತು ಐಶ್ವರ್ಯವನ್ನು ತರುವ ಧರ್ಮಕ್ಕಿಂತ ಮಿಗಿಲಾದ ಭಾಗ್ಯ ಏನುಂಟು ಬಾಳಿನಲ್ಲಿ?
32. ಧರ್ಮಕ್ಕಿಂತ ಮಿಗಿಲಾದ ಸಂಪತ್ತು ಇಲ್ಲ ; ಅದನ್ನು ಮರೆಯುವುದರಿಂದ ಮಿಗಿಲಾದ ಕೇಡೂ ಇಲ್ಲ.
33. ಉಚಿತವಾದ ಮಾರ್ಗಗಳಿಂದ, ಸಲ್ಲತಕ್ಕ ಎಡಗಳಲ್ಲೆಲ್ಲ ಧರ್ಮಕಾರ್ಯವನ್ನು ಬಿಡದೆ ಚರಿಸಿಕೊಂಡು ಬರಬೇಕು.
34. ಮನದಲ್ಲಿ ನಿರ್ಮಲನಾದರೆ ಅದೇ ಧರ್ಮ ; ಮತ್ತೆಲ್ಲವೂ ಬರಿಯ ಆಡಂಬರ.
35. ಅಸೂಯೆ, ಅಳಿಯಾಸೆ, ಕೋಪ, ಮನಸ್ಸು ನೋಯುವ ಮಾತು ನಾಲ್ಕನ್ನು ತೊರೆದು ಬಿಡುವುದೇ ಧರ್ಮ.
36. ಧರ್ಮವನ್ನು ಮುಂದೆ ಎಂದಾದರೂ ಚರಿಸಿದರಾಯಿತು ಎಂದು ಉಪೇಕ್ಷಿಸದೆ, ಇಂದೇ ಕೈಗೊಳ್ಳಬೇಕು ; ಅದೇ ಮರಣ ಕಾಲಕ್ಕೆ ನೆಲೆಯಾದ ಆಧಾರ.
37. ಧರ್ಮದ ಫಲ ಇದೆಂದು ವ್ಯರ್ಥವಾಗಿ ವರ್ಣಿಸಬೇಡ. ಪಲ್ಲಕ್ಕಿ ಹೊರುವವನಲ್ಲಿ ಮತ್ತು ಪಲ್ಲಕ್ಕಿಯಲ್ಲಿ ಕುಳಿತಿರುವವನಲ್ಲಿ ನೋಡು.
38. ದಿನವೊಂದೂ ವ್ಯರ್ಥಮಾಡದಂತೆ ಸದ್ದರ್ಮವನ್ನು ಕೈಗೊಂಡರೆ ಅದು ಒಬ್ಬನ ಮರು ಹುಟ್ಟು ಇಲ್ಲದಂತೆ ಮಾಡುತ್ತದೆ. ಅವನ ಮರುಹುಟ್ಟಿನ ಹಾದಿಯಲ್ಲಿ ಅದು ಅಡ್ಡವಾಗಿಟ್ಟ ಕಲ್ಲಿನಂತೆ ನೆರವಾಗುತ್ತದೆ.
39. ಧರ್ಮ ಮಾರ್ಗದಿಂದ ಬರುವುದೇ ಸುಖ ; ಉಳಿದೆಲ್ಲವೂ ಅಸುಖಕ್ಕೆ ನೆಲೆ ; ಅವುಗಳಲ್ಲಿ ಕೀರ್ತಿಯೂ ಇಲ್ಲ.
40. ಮಾಡಬೇಕಾದುದು ಧರ್ಮವೊಂದೇ ; ಬಿಡಬೇಕಾದುದು ನಿಂದೆ.

ಅಧ್ಯಾಯ 5. ಗೃಹಜೀವನ ಧರ್ಮ

41. ಮನೆವಾರ್ತೆಯುಳ್ಳವನು ಧರ್ಮಗುಣ ಶೀಲರಾದ ಬ್ರಹ್ಮಚಾರಿ, ವಾನಪ್ರಸ್ಥ, ಸಂನ್ಯಾಸಿ ಎಂಬ ಮೂವರಿಗೆ ಅವರವರ ಧರ್ಮದಲ್ಲಿ ಸಾಗಲು ಬೆಂಬಲವಾಗುತ್ತಾನೆ.
42. ಆಶ್ರಯವಿಲ್ಲದವರು, ದರಿದ್ರರು, ಸತ್ತವರು ಎಲ್ಲರಿಗೂ ಗೃಹಸ್ಥನೇ ಆಧಾರ.
43. ಪಿತೃಗಳು, ದೇವತೆಗಳು, ಅತಿಥಿಗಳು, ನೆಂಟರಿಷ್ಟರು ಮತ್ತು ತಾನು- ಐವರ ಋಣಗಳನ್ನು ಸಲ್ಲಿಸುವುದೇ ಗೃಹಸ್ಥ ಧರ್ಮದ ಮಹೋನ್ನತ ಕರ್ತವ್ಯ.
44. ಅಪನಿಂದೆಗಂಜಿ, ಇತರರೊಂದಿಗೆ ತನ್ನ ಸ್ವತ್ತನ್ನು ಹಂಚಿಕೊಂಡು ಉಣ್ಣುವವನ ವಂಶವು ನಾಶವಿಲ್ಲದೆ ಚಿರಕಾಲ ಉಳಿಯುತ್ತದೆ.
45. ಪ್ರೀತಿ, ಸಚ್ಚಾರಿತ್ರ್ಯಗಳನ್ನು ಪಡದರೆ, ಅದೇ ಗೃಹಸ್ಥ ಧರ್ಮದ ಕೀರ್ತಿ ಮತ್ತು ಫಲಗಳು.
46. ಧರ್ಮಮಾರ್ಗದಲ್ಲಿ (ಸಸ್ಮಾರ್ಗದಲ್ಲಿ) ಕುಟುಂಬ ಜೀವನ ನಡಸಿದರೆ, ಬೇರೆ ಮಾರ್ಗಗಳಿಂದ ಹೋಗಿ ಪಡೆಯುವುದಾದರೂ ಏನು?
47. (ಎಲ್ಲರೂ ಮೆಚ್ಚುವ ಹಾಗೆ) ಧರ್ಮಗುಣದಿಂದ ಕುಟುಂಬ ಜೀವನವನ್ನು ನಡೆಸುವವನು, (ಬಾಳಿನ ಶ್ರೇಯಸ್ಸಿಗಾಗಿ) ತಪಸ್ಸು ಮೊದಲಾದ ಹಲವು ತೆರದ ಪ್ರಯತ್ನಗಳನ್ನು ನಡಸುವವರೊಳಗೆಲ್ಲಾ ಮಿಗಿಲಾದವನು.
48. ಇತರರನ್ನು ಸಸ್ಮಾರ್ಗದಲ್ಲಿ ಹಚ್ಚಿ, ತಾನೂ ಧರ್ಮಮಾರ್ಗದಿಂದ ವಿಮುಖನಾಗದೆ ಇರುವವನ ಕುಟುಂಬ ಜೀವನವು, ತಪಸ್ವಿಗಳಿಗಿಂತ ಹೆಚ್ಚು ತಪೋಬಲವುಳ್ಳದ್ದು.
49. ಧರ್ಮವೆಂದೆನಿಸಿಕೊಳ್ಳುವುದೇ ಗೃಹಧರ್ಮ ; ಅದೂ ಪರರ ಕೀರ್ತಿ, ನಿಂದೆಗಳಿಗೆ ಗುರಿಯಾಗದಿದ್ದರೆ ಮತ್ತಷ್ಟು ಶೋಭಿಸುತ್ತದೆ.
50. ಲೋಕದಲ್ಲಿ ಬಾಳಬೇಕಾದ ರೀತಿಯಲ್ಲಿ ಧರ್ಮದಿಂದ ನಡೆಯುವವನು ಸ್ವರ್ಗವಾಸಿಗಳಾದ ದೇವತೆಗಳ ನಡುವೆ ಶೋಭಿಸಲ್ಪಡುವನು. (ಬಸವೇಶ್ವರ ವಚನ : ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ. )

ಅಧ್ಯಾಯ 6. ಬಾಳಸಂಗಾತಿಯ ಒಳಿತು

51. ಮನೆಗೆ ತಕ್ಕ ಮಡದಿಯಾಗಿ, ಪತಿಯ ವರಮಾನದ ಮಿತಿಯರಿತು ಸಂಸಾರವನ್ನು ತೂಗಿಸಿಕೊಂಡು ಹೋಗುವವಳೇ ಬಾಳಿನಾಧಾರವಾಗುವಳು.
52. ಮನೆವಾರ್ತೆಗೆ ತಕ್ಕ ಸದ್ಗುಣಗಳು ಮನೆಯೊಡತಿಯಲ್ಲಿ ಇಲ್ಲವಾದರೆ ಬೇರೆ ಎಷ್ಟು ಸಿರಿಸಂಪದಗಳಿದ್ದರೂ ನಿರರ್ಥಕವೆನಿಸುತ್ತದೆ.
53. ಮನೆಯೊಡತಿ ಸದ್ಗುಣವಂತೆಯಾದರೆ ಬಾಳಿನಲ್ಲಿ ಇಲ್ಲವಾದುದಾದರೂ ಏನು? ಅವಳಲ್ಲಿ ಸದ್ಗುಣಗಳಿಲ್ಲವಾದರೆ ಬಾಳಿನಲ್ಲಿ ಇರುವುದಾದರೂ ಏನು?
54. ಹಣ್ಣಿನಲ್ಲಿ ಪಾತಿವ್ರತ್ಯ (ಚಾರಿತ್ರ್ಯ) ವೆಂಬ ಸ್ಥಿರಗುಣವು ನೆಲೆಯಾಗಿದ್ದಲ್ಲಿ, ಹೆಣ್ಣಿಗಿಂತ ಹಿರಿದಾದ ವಸ್ತು ಮತ್ತಾವುದಿದೆ ?
55. ಬೇರೆ ದೈವಗಳಿಗೆರಗದೆ ತನ್ನ ಪತಿಗೆರಗಿ ಏಳುವವಳು, ಹುಯ್ಯೆಂದರೆ ಮಳೆ ಹುಯ್ಯುವುದು.
56. ತನ್ನ ಶೀಲ ಚಾರಿತ್ರ್ಯಗಳನ್ನು ಕಾದುಕೊಂಡು, ಕೈ ಹಿಡಿದ ಗಂಡನನ್ನು ಉಪ ಚರಿಸಿ, ತನ್ನ ಕುಟುಂಬದ ಕೀರ್ತಿಯನ್ನು ಕಾದು, ಧರ್ಮಮಾರ್ಗದಲ್ಲಿ ದೃಢವಾಗಿ ನಡೆಯುವವಳೆ ಹೆಣ್ಣು.
57. (ಹೆಂಗಸರನ್ನು) ಕಾವಲಿಟ್ಟು ಕಾಪಾಡಿದರೇನು ಪ್ರಯೋಜನ ? ತಮ್ಮ ಶೀಲ ರಕ್ಷಣೆಯ ಬಗ್ಗೆ ಅವರಿಗಿರುವ ಮನೋ ನೆಶ್ಚಯವೇ ಎಲ್ಲಕ್ಕಿಂತ ಮುಗಿಲಾದ ಕಾವಲು.
58. ಪಡೆದ ಪತಿಯನ್ನು ಮೆಚ್ಚಿಕೊಂಡು ಅವನೊಂದಿಗೆ ಬಾಳಿದರೆ, ಹೆಂಗಸರು ಬಹಳ ವೈಭವವುಳ್ಳ ದೇವಲೋಕದ ಸುಖವನ್ನು ಪಡೆಯುತ್ತಾರೆ.
59. ಕೀರ್ತಿಯನ್ನು ಕಾಯುವ ಹೆಂತಿ ಇಲ್ಲದವರು, ತಮ್ಮನ್ನು  ನಿಂದಿಸುವವರ ಎದುರಿನಲ್ಲಿ ಗಂಡೆದೆಯಿಂದ ತಲೆಯೆತ್ತಿ, ನಿರ್ಭೀತರಾಗಿ ನಡೆಯಲಾರರು.
60. ಮನೆಯೊಡತಿಯ (ಹೆಂಡತಿ) ದ್ಗುಣವೇ ಮನೆಗೆ ಮಂಗಳಕರ; ಒಳ್ಳೆಯ ಮಕ್ಕಳನ್ನು ಪಡೆಯುವುದು ಅದಕ್ಕೆ ಮತ್ತಷ್ಟು ಶೋಭೆ ನೀಡುವುದು.

ಅಧ್ಯಾಯ 7. ಮಕ್ಕಳನ್ನು ಪಡೆಯುನಿಕೆ

61. ಅರಿವನ್ನು ತಿಳಿದ ಮಕ್ಕಳನ್ನು ಪಡೆಯುವುದಕ್ಕಿಂತ ನಮಗೆ ಬೇರೆ ಭಾಗ್ಯವಿಲ್ಲ. (ಉಳಿದ ಭಾಗ್ಯಗಳನ್ನು ನಾವು ಲಕ್ಷಿಸುವುದಿಲ್ಲ)
62. ಅಪಕೀರ್ತಿ ಇಲ್ಲದ, ಗುಣಶಾಲಿಗಳಾದ ಮಕ್ಕಳನ್ನು ಪಡೆದರೆ, ಏಳು ಜನ್ಮಗಳಲ್ಲಿಯೂ ಕೇಡಿನಿಂದ ಉಂಟಾಗುವ ದುಃಖವು ನಮ್ಮ ಬಳಿ ಸಾರುವುದಿಲ್ಲ.
63. ತಮ್ಮ ಮಕ್ಕಳೇ ತಮ್ಮ ಸಂಪತ್ತು ಎಂದು (ಬಲ್ಲವರು) ಹೇಳುವರು; ಮಕ್ಕಳ ಸಂಪತ್ತೆಂದರೆ ಅವರವರ ಕರ್ಮಫಲಗಳು.
64. ಮಕ್ಕಳು ತಮ್ಮ ಕಿರುಕೈಗಳಿಂದ ಚೆಲ್ಲಾಡಿದ ಕೂಳು, ಹೆತ್ತವರಿಗೆ ಅಮೃತಕ್ಕಿಂತ ಮಿಗಿಲಾದ ಸವಿ ಉಂಟುಮಾಡುತ್ತದೆ.
65. ಮಕ್ಕಳ ಮೈಯನ್ನು ಸವರುವುದು ಒಡಲಿಗೆ ಹಿತ, ಮಕ್ಕಳ ತೊದಲು ನುಡಿ ಕೇಳುವುದು ಕಿವಿಗೆ ಹಿತ.
66. ತಮ್ಮ ಮಕ್ಕಳ ತೊದಲು ಮಾತನ್ನು ಕೇಳದವರು ಕೊಳಲು ಇನಿದು, ವೀಣೆ ಇನಿದು ಎಂದು ಹೇಳುತ್ತಾರೆ.
67. ತಂದೆಯಾದವನು ತನ್ನ ಮಗನಿಗೆ ಮಾಡುವ ಉಪಕಾರವೆಂದರೆ ಬುದ್ದಿ ಜೀವಿಗಳ ಸಭೆಗಳಲ್ಲಿ ಎದೆಗೊಟ್ಟು ಮಾತನಾಡುವ ಹಾಗೆ ಅವನಿಗೆ ವಿದ್ಯೆ ನೀಡುವುದು.
68. ತಮ್ಮ ಮಕ್ಕಳ ಬೌದ್ದಿಕ ಜಾಣ್ಮೆ ತಮಗೆ ಮಾತ್ರವಲ್ಲದೆ, ಲೋಕದ ಜೀವಿಗಳಿಗೆಲ್ಲಾ ಮಿಗಿಲಾದ ಆನಂದವನ್ನು ಉಂಟುಮಾಡುತ್ತದೆ.
69. ತನ್ನ ಮಗ ಕೀರ್ತಿಶಾಲಿ ಎಂದು ಹೆರರಿಂದ ಕೇಳಿದಾಗ ತಾಯಿಗೆ ಆಗುವ ಆನಂದ, ತಾನು (ಮಗನಿಗೆ) ಜನ್ಮವಿತ್ತಾಗ ಪಡೆದ ಆನಂದಕ್ಕಿಂತ ಮಿಗಿಲಾದುದು.
70. ಮಗನು ತನ್ನ ತಂದೆಗೆ ಮಾದುವ ಉಪಕಾರವೆಂದರೆ, ತಂದೆ ಇವನನ್ನು ಪಡೆಯಲು ಎಷ್ಟು ತಪಸ್ಸು ಮಾಡಿದನೋ ಎಂಬ ಜನರ ಉದ್ಗಾರ.

ಅಧ್ಯಾಯ 8. ಪ್ರೀತಿಪರತೆ

71. ಪ್ರೀತಿಯನ್ನು ಅಡಗಿಸಿಡುವ ಕೀಲಿ ಉಂಟೇ? ಪ್ರೀತಿಯುಳ್ಳವರ ಕಿರು ಕಣ್ಣೀರು (ಅವರೆದೆಯಲ್ಲಿರುವ ಪ್ರೀತಿಯ) ಸಾಕ್ಷಿಯಾಗಿ ಹಲವರರಿಯುವಂತೆ ಮಾಡವುದು.
72. ಪ್ತೀತಿ ಇಲ್ಲದವರು ಎಲ್ಲಾ ತಮ್ಮದು ಎಂದು ತಿಳಿಯುವರುಪ್ರೀತಿಯುಳ್ಳವರು ತಮ್ಮ ಶರೀರವೂ (ಎಲುಬು) ಪರರಿಗಾಗಿದೆ ಎಂದು ತಿಳಿಯುವರು.
73. ಪ್ರೀತಿಯಿಂದ ಸೇರಿ ಬಾಳಿದ ಫಲವೇ ಶರೀರದೊಂದಿಗೆ ಜೀವಿಗೆ ಇರುವ ಸಂಬಂಧ ಎಂದು ಹೇಳುತ್ತಾರೆ.
74. ಪ್ರೀತಿ, (ಇತರರೊಂದಿಗೆ ಬಾಳ ಬಯಸುವ) ಸಹೃದಯತೆಯನ್ನುಂಟುಮಾಡುವುದು. ಸಹೃದಯತೆಯು ಸ್ನೇಹವೆಂಬ ಅಳವರಿಯದ ಹಿರಿಮೆಯನ್ನು ತರುವುದು.
75. ಈ ಲೋಕದಲ್ಲಿ ಸುಖವನ್ನು ಹೊಂದಿ ಬಾಳುವವರು, ಮುಂದೆ ಮೇಲು ಲೋಕದಲ್ಲಿ ಪಡೆಯುವ ಹಿರಿಮೆಯು ಅವರ ಪ್ರೀತಿ ಮೂಲವಾದ ಬಾಳಿನ ಫಲವೆಂದು ಹೇಳುವರು.
76. ಅರಿಯದವರು ಪ್ರೀತಿ ಧರ್ಮಕ್ಕೆ ಮಾತ್ರ ಆಧಾರವೆನ್ನುವರು. ಆದರೆ ಪರಿಶೀಲಿಸಿ ನೋಡಿದರೆ ವೀರಕ್ಕೂ ಅದೇ ಆಧಾರವೆಂದು ತಿಳಿಯುವುದು.
77. ಎಲುಬಿಲ್ಲದ ಹುಲು ಜೀವಿಗಳನ್ನು (ಹುಳುಗಳನ್ನು) ಬಿಸಿಲು ಸುಡುವಂತೆ ಪ್ರೀತಿ ಇಲ್ಲದವರನ್ನು ಧರ್ಮವು ಸುಡುತ್ತದೆ.
78. ಮನದೊಳಗೆ ಪ್ರೀತಿ ಇಲ್ಲದೆ ಬಾಳುವವರ ಜೀವನ, ಕಡು ಮರಳುಕಾಡಿನೊಳಗೆ ಒಣಗಿದ ಮರ ಚಿಗುರಿದಂತೆ.
79. ಶರೀರದ ಒಳ ಅಂಗವಾದ ಮನಸ್ಸಿನಲ್ಲಿ ಪ್ರೀತಿ ಇಲ್ಲದಿದ್ದರೆ, ಶರೀರದ ಹೊರ ಅಂಗಗಳೆಲ್ಲ ಇದ್ದೂ ಏನು ಮಾಡಬಲ್ಲುವು? (ಅವುಗಳಿದ್ದೂ ವ್ಯರ್ಥ)
80. ಪ್ರೀತಿ ಮಾರ್ಗದಲ್ಲಿ ನಡೆಯುವ ಶರೀರವೆ ಜೀವಂತ ಶರೀರ (ಉಸಿರು ದಾಣ) ವಾಗಿರುವುದು. ಅದಿಲ್ಲದವರ ಶರೀರವು ಎಲುಬಿಗೆ ತೊಗಲು ಹೊದಿಸಿದಂತೆ.

ಅಧ್ಯಾಯ 9. ಅತಿಥಿ ಸತ್ಕಾರ

81. ಮನೆಯಲ್ಲಿ ಇದ್ದು (ಸೊತ್ತುಗಳನ್ನೆಲ್ಲ) ಕಾಪಾಡಿ ಮನೆವಾರ್ತೆ ನಡೆಸುವುದೆಲ್ಲಾ ಅತಿಥಿಗಳನ್ನು ಉಪಚರಿಸ ಉಪಕಾರ ಮಾಡುವುದಕ್ಕಾಗಿಯೇ.
82. ಅತಿಥಿಯಾಗಿ ಬಂದವರು ಹೊರಗಿರುವಾರ ಅದು ಅಮೃತವಾದರೂ ತಾನೊಬ್ಬನೇ ಉಣ್ಣಲು ಬಯಸ ಬಾರದು.
83. (ತನ್ನ ಕಾಣಬರುವ) ಅತಿಥಿಯನ್ನು ಯಾವಾಗಲೂ ಉಪಚರಿಸುವವನ ಬಾಳ್ವೆ ಕಷ್ಟಗಳಿಂದ ಪಾಡುಪಟ್ಟು ಹಾಳಾಗುವುದಿಲ್ಲ.
84. ಯೋಗ್ಯ ಅತಿಥಿಗಳನ್ನು ಮುಖವರಳಿಸಿಕೊಂಡು ಉಪಚರಿಸುವಾತನನ್ನು ಸಿರಿಮನವೊಲಿದು ಸೇರುವಳು.
85. ಅತಿಥಿಗಳನ್ನುಪಚರಿಸಿ, ಉಣಬಡಿಸಿ ಮಿಕ್ಕುದನ್ನು ತಾನುಣ್ಣುವವಸ ಹೊಲಗಳಲ್ಲಿ ಬೀಜವನ್ನು ಬಿತ್ತಲೇಕೆ? (ಬಿತ್ತದೆಯೇ ತಾನಾಗಿ ಬೆಳೆಯುವುದು)
86. ಬಂದ ಅತಿಥಿಗಳನ್ನು ಉಪಚರಿಸಿ, ಮತ್ತೆ ಬರುವ ಅತಿಥಿಗಳನ್ನು ಎದುರು ನೋಡುತ್ತಿರುವವನು, ಸ್ವರ್ಗಲೋಕದಲ್ಲಿರುವ ದೇವತೆಗಳಿಗೆ ಒಳ್ಳೆಯ ಅತಿಥಿಯಾಗುತ್ತಾನೆ.
87. ಅತಿಥಿಗಳನ್ನು ಆದರಿಸುವ ಯಜ್ಞದ ಫಲ ಇಷ್ಟು ಎಂದು ಅಳೆಯಲಳವಲ್ಲ. ಅತಿಥಿಗಳ ಯೋಗ್ಯತೆಯನ್ನನುಸರಿಸಿ ಅದು ಉಂಟಾಗುತ್ತದೆ.
88. ಅತಿಥಿಗಳನ್ನು ಆದರಿಸಿ, ಯಜ್ಞಫಲದಲ್ಲಿ ಪಾಲುಗೊಳ್ಳದವರು ತಾವು ಕಷ್ಟಪಟ್ಟು ಕಾಪಾಡಿಟ್ಟ ಸ್ವತ್ತುಗಳೆಲ್ಲ ತಮಗೆ ಅಧಾರವಾಗದೆ ನಿಷ್ಫಲವಾದುವೆ ಎಂದು (ಮುಂದೆ) ಪರಿತಾಪ ಪಡುವರು.
89. ಅತಿಥಿಗಳನ್ನು ಆದರಿಸದಿರುವ ಮೂರ್ಖತನವು, ಸಿರಿಯಿದ್ದೂ ದಾರಿದ್ರ್ಯ ಅನುಭವಿಸಿದಂತೆ; ಅದು ಮೂರ್ಖರಲ್ಲಿ ಇರುತ್ತದೆ.
90. ಅನಿಚ್ಚ ಹೊ ಮೂಸಿದೊಡನೆ ಬಾಡುತ್ತದೆ. (ಅದೇ ರೀತಿ) ಮುಖವರಳಿಸದೆ ಬೇರೆಕಡೆಗೆ ತಿರುಗಿಸಿ ನೋಡಿದರೆ ಅತಿಥಿಯು ಬಾಡಿ ಹೋಗುತ್ತಾನೆ.

ಅಧ್ಯಾಯ 10. ಸವಿಮಾತು ಆಡುವದು

91. ಪ್ರೀತಿಯಿಂದ, ವಂಚನೆಯಿಲ್ಲದೆ, ಪರತತ್ತ್ವವನ್ನು ಆರಿತವರ ನಾಲಗೆಯಿಂದ ಹೊರಡುವ ಮಾತೇ ಸವಿಮಾತು ಎನಿಸಿಕೊಳುತ್ತದೆ.
92. ಮನಸ್ಸು ನಲಿದು ಕೊಡುವುದಕ್ಕಿಂತ ಮಿಗಿಲಾದುದು, ಮುಖವರಳಿಸಿಕೊಂಡು ಸವಿಮಾತನಾಡುವುದು.
93. ಮುಗವರಳಿಸಿಕೊಂಡು  ಸ್ನೇಹಪರನಾಗಿ ನೋಡಿ, ಹೃದಯಮೆಚ್ಚಿ ಸವಿಮಾತುಗಳಾಡುವುದೆ ಸದ್ಧರ್ಮವೆನಿಸುವುದು.
94. ಯಾರೊಡನೆಯಾಗಲಿ ಸಂತೋಷವನ್ನು ಹೆಚ್ಚಿಸುವ ಸಿಹಿ ಮಾತಾಡುವವರಿಗೆ ದುಃಖವನ್ನು ಹೆಚ್ಚಿಸುವ ಬಡತನದ ಕ್ಲೇಶಗಳು ಇಲ್ಲವಾಗುವುದು.
95. ವಿನಯಶೀಲನಾಗಿರುವುದು, ಸವಿಮಾತು ಆಡುವುದು, ಒಬ್ಬನಿಗೆ ಅಲಂಕಾರವೆನಿಸುವುದು. ಬೇರೆ ಯಾವುದೂ ಅಲಂಕಾರವಲ್ಲ.
96. ಹುಡುಕಿ ಒಳೆಯ ಮಾತುಗಳನ್ನು ಹಿತವಾಗುವಂತೆ ಆಡಬೇಕು; ಅದರಿಂದ ಕೇಡಳಿದು ಧರ್ಮವು ವರ್ಥಿಸುತ್ತದೆ.
97. ಫಲಕೊಟ್ಟು ಸವಿತುಂಬಿ ಆಡುವ ಮಾತುಗಳು, ಲೋಕದಲ್ಲಿ ಸುಖನೀಡಿ ಪರಲೋಕದಲ್ಲಿ ಫಲಪ್ರಾಪ್ತಿಯಾಗುವಂತೆ ಮಾಡುತ್ತವೆ.
98. ಇತರರ ಮನಸ್ಸಿಗೆ ನೋವುಂಟುಮಾಡದಿರುವ ಸವಿ ಮಾತುಗಳು ಪರದಲ್ಲಿ ಮತ್ತು ಇಹದಲ್ಲಿ (ಇಹಪರಗಳೆಡರಲ್ಲಿಯೂ) ಸಂತೋಷವನ್ನುಂಟುಮಾಡುತ್ತವೆ.
99. ಸವಿಮಾತುಗಳಲ್ಲಿ ಸುಖಸಂತೋಷಗಳು ಉಂಟೆಂದು ತಿಳಿಯುವವನು ಕಟು ಮಾತುಗಳನ್ನು ಏಕೆ ಆಡಬೇಕು?
100.ಸವಿಮಾತುಗಳಿರುವಾಗ (ಅವುಗಳನ್ನು ಬಿಟ್ಟು) ಕಠಿಣವಾದ ಮಾತುಗಳನ್ನು ಆಡುವವರು, ತನಿವಣ್ಣುಗಳಿರುವಾಗ ಅವುಗಳನ್ನು ಬಿಟ್ಟು ಕಾಯನ್ನು ಕಿತ್ತುಕೊಂಡು ತಿಂದಂತೆ.

No comments:

Post a Comment